Home Bengaluru ಇಸ್ಕಾನ್ ಬೆಂಗಳೂರಿನಲ್ಲಿ ವಿಶ್ವಗುರು ಸಂಭ್ರಮೋತ್ಸವ

ಇಸ್ಕಾನ್ ಬೆಂಗಳೂರಿನಲ್ಲಿ ವಿಶ್ವಗುರು ಸಂಭ್ರಮೋತ್ಸವ

ಶ್ರೀಲ ಪ್ರಭುಪಾದರಿಗೆ ನೀಡಿದ ‘ವಿಶ್ವಗುರು’ ಗೌರವದ ಸ್ಮರಣಾರ್ಥ ಸಂಭ್ರಮೋತ್ಸವ

0

ಬೆಂಗಳೂರು, ಸೆಪ್ಟೆಂಬರ್ 27: ಕಳೆದ ವರ್ಷ ನಡೆದ ಪವಿತ್ರ ಮಹಾ ಕುಂಭಮೇಳದ ಸಂದರ್ಭದಲ್ಲಿ ಶ್ರೀಲ ಪ್ರಭುಪಾದರಿಗೆ ನೀಡಿದ ‘ವಿಶ್ವಗುರು’ ಗೌರವದ ಸ್ಮರಣಾರ್ಥ ಇಸ್ಕಾನ್ ಬೆಂಗಳೂರು, ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ನಿರಂಜನಿ ಅಖಾಡ, ಹರಿದ್ವಾರದ ಆಚಾರ್ಯ ಮಹಾಮಂಡಲೇಶ್ವರರಾದ ಪರಮಪೂಜ್ಯ ಕೈಲಾಶಾನಂದ ಗಿರಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಭವ್ಯ ವಿಶ್ವಗುರು ಸಂಭ್ರಮೋತ್ಸವ ನಡೆಯಿತು. ಸನಾತನ ಧರ್ಮ ಮತ್ತು ಹಿಂದೂ ಶಾಸ್ತ್ರಗಳ ಪ್ರಸಾರದಲ್ಲಿ ತೊಡಗಿರುವ ಖ್ಯಾತ ವೈದಿಕ ವಿದ್ವಾಂಸ, ವಾಗ್ಮಿ, ಲೇಖಕ ಹಾಗೂ ನಿರ್ದೇಶಕರಾದ ಶ್ರೀ ದುಷ್ಯಂತ್ ಶ್ರೀಧರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಇಸ್ಕಾನ್ ಬೆಂಗಳೂರು ಅಧ್ಯಕ್ಷರು ಹಾಗೂ ಅಕ್ಷಯ ಪಾತ್ರ ಪ್ರತಿಷ್ಠಾನದ ಸಂಸ್ಥಾಪಕ-ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಮತ್ತು ಇಸ್ಕಾನ್ ಬೆಂಗಳೂರು ಹಿರಿಯ ಉಪಾಧ್ಯಕ್ಷರು ಹಾಗೂ ಅಕ್ಷಯ ಪಾತ್ರ ಪ್ರತಿಷ್ಠಾನದ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷರಾದ ಶ್ರೀ ಚಂಚಲಪತಿ ದಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಕ್ತರು, ದಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2025ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ಸಂದರ್ಭದಲ್ಲಿ ಅಖಿಲ ಭಾರತೀಯ ಅಖಾಡ ಪರಿಷತ್, ಇಸ್ಕಾನ್ ಸಂಸ್ಥಾಪಕಾಚಾರ್ಯರಾದ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಗೆ ‘ವಿಶ್ವಗುರು’ ಗೌರವವನ್ನು ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಪರಮಪೂಜ್ಯ ಕೈಲಾಶಾನಂದ ಗಿರಿ ಮಹಾರಾಜರು, ವಿವಿಧ ಅಖಾಡಗಳ ಮಹಾಮಂಡಲೇಶ್ವರರೊಂದಿಗೆ ಸೇರಿ, ಜಗತ್ತಿಗೆ ಹಾಗೂ ಸನಾತನ ಧರ್ಮಕ್ಕೆ ಶ್ರೀಲ ಪ್ರಭುಪಾದರು ನೀಡಿದ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ಅವರನ್ನು ಗೌರವಿಸಿದ್ದರು.

ಶ್ರೀಲ ಪ್ರಭುಪಾದರು ಪವಿತ್ರ ಶ್ರೀ ಬ್ರಹ್ಮ-ಮಧ್ವ-ಗೌಡೀಯ ಸಂಪ್ರದಾಯದಲ್ಲಿ ಅವತರಿಸಿದ ಶಕ್ತ್ಯಾವೇಶ ವೈಷ್ಣವ ಆಚಾರ್ಯರು. ಅವರು ನಮ್ಮ ಸನಾತನ ಜ್ಞಾನ, ಭಾರತೀಯ ಸಂಸ್ಕೃತಿ ಹಾಗೂ ಜೀವನಪದ್ಧತಿಯನ್ನು ಭಾರತದ ಗಡಿಗಳನ್ನು ದಾಟಿಸಿ ವಿಶ್ವದಾದ್ಯಂತ ಪರಿಚಯಿಸಿದರು. ಭಗವಾನ್ ಶ್ರೀಕೃಷ್ಣನ ಸಂದೇಶವನ್ನು ಪ್ರಸಾರ ಮಾಡುವ ಅವರ ಅಪ್ರತಿಮ ಪ್ರಯತ್ನಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿವೆ.

ಸಂಭ್ರಮೋತ್ಸವವು ಮಂಗಳಾಚರಣೆ ಹಾಗೂ ಉತ್ಸಾಹಭರಿತ ಹರಿನಾಮ ಸಂಕೀರ್ತನೆಯೊಂದಿಗೆ ಆರಂಭವಾಯಿತು. ನಂತರ ಗಣ್ಯರಿಂದ ಪ್ರೇರಣಾದಾಯಕ ಭಾಷಣಗಳು ನಡೆದವು. ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಲ ಪ್ರಭುಪಾದರ ಕೊಡುಗೆಗಳನ್ನು ಪ್ರಶಂಸಿಸಿದ ದೃಶ್ಯಾವಳಿಗಳ ಸಂಗ್ರಹ ಹಾಗೂ ಮಹಾ ಕುಂಭಮೇಳದ ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನು ಸಭಿಕರಿಗೆ ಪ್ರದರ್ಶಿಸಲಾಯಿತು.

ಕಾರ್ಯಕ್ರಮವು ಶ್ರೀಲ ಪ್ರಭುಪಾದರಿಗೆ ಗುರುಪೂಜೆ ಸಲ್ಲಿಸುವುದರೊಂದಿಗೆ ಹಾಗೂ ಎಲ್ಲರಿಗೂ ರುಚಿಕರವಾದ ಕೃಷ್ಣ ಪ್ರಸಾದ ವಿತರಿಸುವುದರೊಂದಿಗೆ ಸಂಪನ್ನವಾಯಿತು.

Previous articleWagh Bakri Premium Leaf Brews ‘Kadak’ with a ‘Swadbhari’ Twist in Karnataka, with Anushree