Home Bengaluru ಇಸ್ಕಾನ್ ಬೆಂಗಳೂರಿನಲ್ಲಿ ಭವ್ಯ ಬ್ರಹ್ಮೋತ್ಸವ ಸಂಪನ್ನ

ಇಸ್ಕಾನ್ ಬೆಂಗಳೂರಿನಲ್ಲಿ ಭವ್ಯ ಬ್ರಹ್ಮೋತ್ಸವ ಸಂಪನ್ನ

0

ಬೆಂಗಳೂರು, ಏಪ್ರಿಲ್ 12: ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಬೆಂಗಳೂರಿನ ದೇವಾಲಯದಲ್ಲಿ ಶ್ರೀ ರಾಧಾ ಕೃಷ್ಣಚಂದ್ರರ 29ನೇ ವಾರ್ಷಿಕ ಬ್ರಹ್ಮೋತ್ಸವವು ಏಪ್ರಿಲ್ 12ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಏಪ್ರಿಲ್ 1ರಂದು ಧ್ವಜಾರೋಹಣದೊಂದಿಗೆ ಆರಂಭವಾದ ಈ 12 ದಿನಗಳ ಹಬ್ಬವು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರನ್ನು ಸೆಳೆದು, ಶ್ರದ್ಧೆ, ಸಂಸ್ಕೃತಿ ಮತ್ತು ಭಕ್ತಿಯ ಮಹಾ ಸಂಭ್ರಮವಾಗಿ ನಡೆಯಿತು.

ಪ್ರತಿ ಸಂಜೆ ಉತ್ಸವ ಮೂರ್ತಿಗಳನ್ನು ಸುಂದರವಾಗಿ ಅಲಂಕರಿಸಿ ಹನುಮದ್ ವಾಹನ, ಗರುಡ ವಾಹನ, ಅನಂತ ಶೇಷ ವಾಹನ ಮತ್ತು ಕಲ್ಪ ವೃಕ್ಷ ವಾಹನಗಳ ಮೇಲೆ ಕುಳ್ಳಿರಿಸಿ, ಕೀರ್ತನೆಗಳ ನಡುವೆ ದೇವಾಲಯದ ಸುತ್ತ ಮೆರವಣಿಗೆ ನಡೆಯಿತು. ಮೆರವಣಿಗೆಯ ನಂತರ ನೃತ್ಯ, ನಾಟಕ ಮತ್ತು ಭಕ್ತಿ ಸಂಗೀತದ ಕಾರ್ಯಕ್ರಮಗಳೂ ನಡೆದವು. ಏಪ್ರಿಲ್ 12ರಂದು ತೆಪ್ಪೋತ್ಸವದೊಂದಿಗೆ ಹಬ್ಬಕ್ಕೆ ಅದ್ಭುತ ಸಮಾಪ್ತಿ ನಿಡಲಾಯಿತು. ಶ್ರೀ ರಾಧಾ ಕೃಷ್ಣಚಂದ್ರರನ್ನು ಸುಗಂಧಭರಿತ ಹೂಮಾಲೆಗಳಿಂದ ಅಲಂಕರಿಸಿದ ಪುಷ್ಪ ಪಲ್ಲಕಿಯಲ್ಲಿ ದೇವಾಲಯದ ಕಲ್ಯಾಣಿಗೆ ಕರೆತರಲಾಯಿತು. ಅಲ್ಲಿ ದೀಪಾಲಂಕಾರ ಮತ್ತು ಉತ್ಸಾಹಭರಿತ ಕೀರ್ತನೆಗಳ ಮಧ್ಯೆ ತೆಪ್ಪೋತ್ಸವದ ಸೇವೆ ಸಲ್ಲಿಸಲಾಯಿತು.

ಈ ಉತ್ಸವಕ್ಕೆ ಹೆಸರಾಂತ ಆಧ್ಯಾತ್ಮಿಕ ಗುರುಗಳು ಮತ್ತು ಗಣ್ಯರು ಆಗಮಿಸಿ ಮೆರಗು ನೀಡಿದರು. ಉಡುಪಿಯ ಶ್ರೀ ಪುತ್ತಿಗೆ ಮಠದ 30ನೇ ಪೀಠಾಧಿಪತಿ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಕಾಣಿಯೂರು ಮಠದ 30ನೇ ಪೀಠಾಧಿಪತಿ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯರು ಮತ್ತು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲರಾದ ವಿದ್ವಾನ್ ಶ್ರೀ ಸತ್ಯನಾರಾಯಣಾಚಾರ್ಯರು ಉಪಸ್ಥಿತರಿದ್ದು ತಮ್ಮ ಪ್ರವಚನಗಳ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದರು.

ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಮಧುಪಂಡಿತ ದಾಸ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಶ್ರೀ ರಾಧಾ ಕೃಷ್ಣಚಂದ್ರರ 29ನೇ ಬ್ರಹ್ಮೋತ್ಸವವು ನಮ್ಮ ಮನಸ್ಸನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿಸಿದೆ. ಕಳೆದ 29 ವರ್ಷಗಳಿಂದ ಹರೇ ಕೃಷ್ಣ   ಗಿರಿಯಲ್ಲಿ ನಮ್ಮ ಸೇವೆಯನ್ನು ಸ್ವೀಕರಿಸುತ್ತಿರುವುದು ನಮ್ಮ ಅದೃಷ್ಟ. ಕುಟುಂಬಗಳು, ಮಕ್ಕಳು ಮತ್ತು ಯುವಕರು ಸೇರಿ ಲಕ್ಷಾಂತರ ಭಕ್ತರು ಒಟ್ಟಾಗಿ ಭಕ್ತಿಯಿಂದ ಭಾಗವಹಿಸಿದ್ದನ್ನು ನೋಡಿ ನಮಗೆ ತುಂಬಾ ಖುಷಿಯಾಗಿದೆ. ಬ್ರಹ್ಮೋತ್ಸವದಂತಹ ಹಬ್ಬಗಳು ಜನರನ್ನು ಒಟ್ಟಿಗೆ ಸೇರಿಸಿ ಶ್ರೀ ಕೃಷ್ಣನ ಸೇವೆಯ ಮೂಲಕ ಭಕ್ತಿಯ ನಂಟನ್ನು ಗಟ್ಟಿಗೊಳಿಸುತ್ತವೆ. ಶ್ರೀ ರಾಧಾ ಕೃಷ್ಣಚಂದ್ರರು ಎಲ್ಲರಿಗೂ ಒಳ್ಳೆಯ ಆರೋಗ್ಯ, ಶಾಂತಿ ಮತ್ತು ಭಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ” ಎಂದರು.

Previous article“Cinema is not just about big screens, but about ideas, passion, and courage” – Naveen Shankar
Next articleAster DM Healthcare strengthens its 12+ year legacy in Bengaluru with expansion of ‘Women & Children’ facility at Aster Whitefield Hospital