ಬೆಂಗಳೂರು, ಜುಲೈ 4: ಶುಕ್ರವಾರ (03.07.2026) ಬೆಂಗಳೂರು ಜಯನಗರದಲ್ಲಿ ಮೈಸೂರು ಬ್ಯಾಂಕ್ ನೌಕರರ ಶಿಕ್ಷಣ ಸಮಿತಿಯು ನಡೆಸುತ್ತಿರುವ ರಾಣಿ ಸರಳಾದೇವಿ ವಿದ್ಯಾ ಸಂಸ್ಥೆಯಲ್ಲಿ ಸ್ಥಳೀಯ ರೋಟರಿ ಪ್ರೈಂ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 400ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ನೋಟ್ ಪುಸ್ತಕಗಳು ಹಾಗೂ ಶಾಲಾ ಬ್ಯಾಗ್ ಗಳನ್ನೊಳಗೊಂಡ ಸಾಕ್ಷರತಾ ಕಿಟ್ (Literacy Kit) ಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದ ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಜೂಹಿ ಸ್ಮಿತಾ ಸಿನ್ಹಾ ಅವರು ಮಾತನಾಡಿ, ಮಕ್ಕಳು ಸಾಂಪ್ರದಾಯಿಕ ಶಿಕ್ಷಣ ಪಡೆಯುವುದರ ಜೊತೆಗೇ ಕೌಶಲ್ಯಾಭಿವೃದ್ದಿಯನ್ನೂ ಈಗಿನಿಂದಲೇ ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಉದ್ಯಮಿಗಳಾಗಲು ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಹೆಚ್ಚಿನ ಉದ್ಯೋಗಕ್ಕೆ ಬೇಡಿಕೆ ಇದೆ. ವಿದ್ಯಾರ್ಥಿಗಳು ಇಂದಿನಿಂದಲೇ ದೂರದೃಷ್ಟಿ ಇಟ್ಟುಕೊಂಡು ಬೆಳೆಯಬೇಕು ಎಂದರಲ್ಲದೇ, ನಮ್ಮ ಸ್ಟೇಟ್ ಬ್ಯಾಂಕಿನ ಭಾಗವೇ ಆಗಿದ್ದ ಮೈಸೂರು ಬ್ಯಾಂಕಿನವರು ಕಳೆದ ಏಳು ದಶಕಗಳಿಂದ ರಾಣಿ ಸರಳಾದೇವಿ ವಿದ್ಯಾ ಸಂಸ್ಥೆಯನ್ನು ಯಶಸ್ವಿಯಾಗಿ ಮನ್ನಡೆಸುತ್ತಿರುವುದನ್ನು ಹಾಗೂ ಅದಕ್ಕೆ ರೋಟರಿ ಸಂಸ್ಥೆಯ ವಿವಿಧ ಕೊಡುಗೆಗಳನ್ನು ಶ್ಲಾಘಿಸಿದರು.

ಖ್ಯಾತ ಉದ್ಯಮಿ ಹಾಗೂ ಸಾಕ್ಷರತಾ ಕಿಟ್ ಪ್ರಾಯೋಜಕರಾದ ರೊಟೋರಿಯನ್ ಅರವಿಂದ್ ಸಾಲಾಂಪುರಿಯಾ ಅವರು ಮಾತನಾಡಿ, ರಾಣಿ ಸರಳಾದೇವಿ ಶಿಕ್ಷಣ ಸಂಸ್ಥೆ ಮತ್ತು ರೋಟರಿ ಸಂಸ್ಥೆಯ ನಡುವಣ ಅವಿನಾಭಾವ ಸಂಬಂಧಗಳನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿಯೂ ರೋಟರಿ ಸಂಸ್ಥೆ ಇನ್ನಷ್ಟು ಪ್ರೋತ್ಸಾಹಗಳನ್ನು ನೀಡಲಿದೆ ಎಂದರು.
ರೋಟರಿ ಪ್ರೈಂ ಸಂಸ್ಥೆಯ ಅಧ್ಯಕ್ಷೆ ರೊಟೋರಿಯನ್ ಇಂದಿರಾ ರಘು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಿ.ಕೋದಂಡರಾಂ ಅವರು ಮಾತನಾಡಿ, 1955ರಷ್ಟು ಹಿಂದೆಯೇ ಮೈಸೂರು ಬ್ಯಾಂಕಿನವರೇ ಆರಂಭಿಸಿ ಮುನ್ನಡೆಸುತ್ತಿರುವ ತಮ್ಮ ಸಂಸ್ಥೆಗೆ ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕರು ಆಗಮಿಸಿರುವುದು ನಮ್ಮ ಸುಯೋಗ ಎಂದು, ಈ ನಿಟ್ಟಿನಲ್ಲಿ ರೋಟರಿ ಪ್ರೈಂ ಸಂಸ್ಥೆಯ ಸಹಯೋಗವನ್ನು ಸ್ಮರಿಸಿದರು.

ಆರಂಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿ ಕು.ಯಶಸ್ವಿನಿಯಿಂದ ಪ್ರಾರ್ಥನೆಯ ನಂತರ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಕೆ. ಲಕ್ಷ್ಮೀಶ ಸ್ವಾಗತಿಸಿದರು. ಕೊನೆಯಲ್ಲಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಸುನೀಲ್ ಬಾಬು ವಂದಿಸಿದರು. ಲಕ್ಷ್ಮೀ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.





























































