Home Bengaluru ಭಾರತದ ಆರ್ಥಿಕ ಅಭಿವೃದ್ಧಿಗೆ ರಫ್ತು ನಿರ್ಣಾಯಕ: ವೋಲ್ವೊ ಅಧ್ಯಕ್ಷ ಕಮಲ್‌ ಬಾಲಿ

ಭಾರತದ ಆರ್ಥಿಕ ಅಭಿವೃದ್ಧಿಗೆ ರಫ್ತು ನಿರ್ಣಾಯಕ: ವೋಲ್ವೊ ಅಧ್ಯಕ್ಷ ಕಮಲ್‌ ಬಾಲಿ

0

ಬೆಂಗಳೂರು: ಭಾರತದ ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ರಫ್ತನ್ನು ಗಣನೀಯವಾಗಿ ಹೆಚ್ಚಳ ಮಾಡುವುದು ನಿರ್ಣಾಯಕವಾಗಿದೆ ಎಂದು ವೋಲ್ವೊ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕಮಲ್‌ ಬಾಲಿ ಹೇಳಿದರು.

ಬೆಂಗಳೂರಿನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆ ಸಿಸಿಐ) ಆಯೋಜಿಸಿದ್ದ, 2026ನೇ ಸಾಲಿನ 21ನೇ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ರಾಷ್ಟ್ರ ನಿರ್ಮಾಣದಲ್ಲಿ ರಫ್ತುದಾರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದ ಅವರು ಅದು ಹೇಗೆ ಎಂಬುದನ್ನೂ ವಿವರಿಸಿದರು. ದೇಶದ ರಫ್ತು ಕಡಿಮೆಯಾದಾಗ, ಆಮದು ಹೆಚ್ಚಳವಾದಾಗ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ಹೆಚ್ಚುತ್ತದೆ. ರುಪಾಯಿ ಮೌಲ್ಯ ಕುಸಿಯುತ್ತದೆ. ಆದರೆ ಯಾವಾಗ ರಫ್ತು ಹೆಚ್ಚುತ್ತದೆಯೋ, ಆಗ ಡಾಲರ್‌ ಮೌಲ್ಯ ಇಳಿಯುತ್ತದೆ. ಹಾಗೂ ರುಪಾಯಿ ಮೌಲ್ಯ ವೃದ್ಧಿಸುತ್ತದೆ. ಆದ್ದರಿಂದ ರಾಷ್ಟ್ರ ನಿರ್ಮಾಣದಲ್ಲಿ, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರಫ್ತುದಾರರು ನಿರ್ಣಾಯ ಪಾತ್ರ ವಹಿಸುತ್ತಾರೆ ಎಂದು ವೋಲ್ವೊ ಅಧ್ಯಕ್ಷ ಕಮಲ್‌ ಬಾಲಿ ವಿವರಿಸಿದರು.

ರಫ್ತು ಎಂದರೆ ಕೇವಲ ವಿದೇಶಕ್ಕೆ ಉತ್ಪನ್ನ, ಸೇವೆಗಳ ಮಾರಾಟದ ಅಂಕಿ ಅಂಶಗಳು ಮಾತ್ರವಲ್ಲ, ದೇಶದ ಜಿಡಿಪಿಗೆ ರಫ್ತು ಮಹತ್ತ್ವದ ಕೊಡುಗೆ ನೀಡುತ್ತದೆ. ಎರಡನೇ ಸ್ತರದ ನಗರ, ಪಟ್ಟಣಗಳಿಂದಲೂ ಇತ್ತೀಚೆಗೆ ರಫ್ತು ಹೆಚ್ಚಳವಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.

ರಫ್ತುದಾರರು ಇವತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಹಲವಾರು ದೇಶಗಳು ರಕ್ಷಣಾತ್ಮಕ ಧೋರಣೆ ತಾಳುತ್ತಿದ್ದಾರೆ. ಭೌಗೋಳಿಕವಾಗಿ ಸಂಘರ್ಷಗಳು, ಯುದ್ಧಗಳು ಜಾಗತಿಕ ವ್ಯಾಪಾರಕ್ಕೆ ಹೊಡೆತ ನೀಡುತ್ತವೆ. ಇಂಥ ಸವಾಲುಗಳ ನಡುವೆಯೂ ಭಾರತವು ಹಲವಾರು ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಏರ್ಪಡಿಸುವ ಮೂಲಕ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಭಾರತವು ಜಗತ್ತಿನ 70 ಪರ್ಸೆಂಟ್‌ ಜಿಡಿಪಿಗೆ ಸಮಾನವಾಗುವಷ್ಟು ದೇಶಗಳು, ಒಕ್ಕೂಟಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ. ಎಫ್‌ಟಿಎಗಳಿಂದಾಗಿ ರಫ್ತುದಾರರಿಗೆ ವಿದೇಶಗಳಿಗೆ ರಫ್ತು ಮಾಡಲು ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಜತೆಗೆ ಒಂದಷ್ಟು ವಸ್ತುಗಳ ಆಮದು ಕೂಡ ಆಗುತ್ತವೆ. ಆದರೆ ಅವುಗಳ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯ ಉದ್ದಿಮೆದಾರರಿಗೆ, ರಫ್ತುದಾರರಿಗೆ ಇದೆ ಎಂದು ವಿವರಿಸಿದರು.

ರಫ್ತುದಾರರಿಗೆ ಒಂದಷ್ಟು ಕಾರ್ಯತಂತ್ರಗಳನ್ನೂ ಅವರು ಮನವರಿಕೆ ಮಾಡಿಕೊಟ್ಟರು. ರಫ್ತು ಎಂದರೆ ಸಮಗ್ರ ಮೌಲ್ಯ ವೃದ್ಧಿಯ ಸರಣಿಯಾಗಿದೆ. ತಮ್ಮದೇ ವಿನ್ಯಾಸ, ಉತ್ಪಾದನೆ, ವಿತರಣೆ, ರಫ್ತಿನ ಸಮಗ್ರ ಜಾಲವನ್ನು ಹೊಂದಬೇಕು. ಆಗ ಮಾತ್ರ ಉತ್ಪಾದನೆ ವಲಯವು ದೇಶದ ಜಿಡಿಪಿಗೆ 14 ಪರ್ಸೆಂಟಿಗಿಂತ ಹೆಚ್ಚು ಕೊಡುಗೆ ನೀಡಬಲ್ಲುದು. ಅಂಥ ಇಕೊ ಸಿಸ್ಟಮ್‌ ಅನ್ನು ನಿರ್ಮಿಸಲು ಎಲ್ಲರೂ ಯತ್ನಿಸಬೇಕು ಎಂದು ವಿವರಿಸಿದರು.

ಕಾರ್ಯಕ್ರಮ ದಲ್ಲಿ ಎಫ್ ಕೆ ಸಿ ಸಿ ಐ ಅಧ್ಯಕ್ಷೆ ಉಮಾ ರೆಡ್ಡಿ, ವಿ ಟಿ ಪಿ ಸಿ ಎಂ ಡಿ ರಮೇಶ್, ಚುನಾಯಿತ ಅಧ್ಯಕ್ಷ ಟಿ ಸಾಯಿ ರಾಮ್ ಪ್ರಸಾದ್, ಚುನಾಯಿತ ಹಿರಿಯ ಉಪಾಧ್ಯಕ್ಷ ಬಿ ಪಿ ಶಶಿಧರ್, ರಫ್ತು ಪ್ರಶಸ್ತಿ ಛೇರ್ಮನ್ ಬಿ ಎ ಅಭಿಷೇಕ್, ನಿಕಟ ಪೂರ್ವ ಅಧ್ಯಕ್ಷ ಎಂ ಜಿ ಬಾಲಕೃಷ್ಣ, ಪ್ರಶಸ್ತಿ ಸಮಿತಿ ಸಲಹೆಗಾರ ಜೆ ಕ್ರಾಸ್ಟ ಇನ್ನು ಇತರ ಗಣ್ಯರು ಭಾಗವಹಿಸಿದ್ದರು.

Previous articleWorld Textile India 2026 logo unveiled ahead of Bangalore’s global textile expo