ಬೆಂಗಳೂರು: ಗಾಯಕ, ವಾಗ್ಗೇಯಕಾರ, ಸಂಗೀತ ಸಂಯೋಜಕ, ನಟ, ಕವಿ, ಕಾದಂಬರಿಕಾರ, ನಾಟಕಕಾರ,ಹಾಗೂ ಹಲವು ಸಂಗೀತ ಶಾಸ್ತ್ರಗ್ರಂಥಗಳ ಲೇಖಕ, ಗಾನಭೂಷಣ ಡಾ|| ಆರ್ ಕೆ ಪದ್ಮನಾಭ, ಅವರ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಸಂಗೀತ ಹಾಗೂ ಸಾಹಿತ್ಯ ರಸಿಕರಿಗೆ ಪರಿಚಯಿಸುವ ವಿನೂತನ ಕಾರ್ಯಕ್ರಮವನ್ನು ಶ್ರೀಮದ್ವಾದಿರಾಜ ಆರಾಧನಾ ಟ್ರಸ್ಟ್ (ಶಾರದಾ ಕಲಾಕೇಂದ್ರ) ಹಾಗೂ ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ಇಂದು ನಗರದಲ್ಲಿ ಏರ್ಪಡಿಸಿತ್ತು.
ಗಾನಭೂಷಣ ಡಾ|| ಆರ್. ಕೆ ಪದ್ಮನಾಭ ಅವರು ರಚಿಸಿರುವ ಐದು ಕಾದಂಬರಿಗಳ ಪುನರ್ ಮುದ್ರಣದ ಬಿಡುಗಡೆಯ ಸಂದರ್ಭದಲ್ಲಿ ಆ ಕಾದಂಬರಿಗಳಲ್ಲಿ “ಕರ್ನಾಟಕ ಸಂಗೀತದ ಅನುರಣನ” ಕುರಿತು ವಿಚಾರ ಸಂಕಿರಣವನ್ನೂ ಹಾಗೂ ಡಾ||ಆರ್ ಕೆ ಪದ್ಮನಾಭ ಅವರು ಹೊಸ ರಾಗಗಳಲ್ಲಿ ರಚಿಸಿರುವ ಕೃತಿಗಳ ಗಾಯನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ಆಗಮಿಸಿದ್ದ ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ,ಅಂಕಣಕಾರ ಶ್ರೀ. ಎನ್ ಎಸ್ ಶ್ರೀಧರಮೂರ್ತಿ ಅವರು ಐದು ಕಾದಂಬರಿಗಳ ಲೋಕಾರ್ಪಣೆ ಮಾಡಿ, ಕಾದಂಬರಿಗಳ ವೈಶಿಷ್ಟ್ಯವನ್ನು ವಿವರಿಸಿ ಅವು ಹೇಗೆ, ಭಿನ್ನ ಶಿಸ್ತುಗಳ ಅಂತರಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಅದರ ಜೊತೆಗೆ, ಸಂಗೀತಗಾರರೊಬ್ಬರು ಐದು ಕಾದಂಬರಿಗಳನ್ನು ರಚಿಸಿರುವುದು ಕನ್ನಡ ಸಾಹಿತ್ಯದಲ್ಲಿ ಹೊಸ ದಾಖಲೆ ಎಂದು ತಿಳಿಸಿದರು.
“ಅನಂತನಾದ” ಕಾದಂಬರಿಯ ಬಗ್ಗೆ ಖ್ಯಾತ ಗಮಕಿ,ಪ್ರಬಂಧಕಾರ್ಥಿ ಶ್ರೀಮತಿ. ಶಾಂತಾ ನಾಗಮಂಗಲ, “ನಾದ ಬಿಂದು”ಕಾದಂಬರಿಯ ಬಗ್ಗೆ ಖ್ಯಾತ ಕಥೆಗಾರ್ತಿ,ಕಾದಂಬರಿಗಾರ್ಥಿ ಶ್ರೀಮತಿ ಗಿರಿಜಾ ರಾಜ್, “ವಿಪ್ರ ವಿಕ್ರಮ”ಕಾದಂಬರಿಯ ಬಗ್ಗೆ ಕವಿ,ಸಾಹಿತಿ,ಚಿಂತಕ ಶ್ರೀ ಬಿ ಎಸ್ ಚಂದ್ರಶೇಖರ್, “ಸುವರ್ಣಗಾನ” ಕಾದಂಬರಿಯ ಬಗ್ಗೆ ಗಾಯಕಿ,ಕವಿ,ಕಾದಂಬರಿಗಾರ್ತಿ ವಿದುಷಿ ಶ್ರೀಮತಿ ರಂಜನೀ ಕೀರ್ತಿ ಹಾಗೂ “ಬೇವು ಬೆಲ್ಲ” ಕಾದಂಬರಿಯ ಬಗ್ಗೆ ಲೇಖಕ, ವಿಮರ್ಶಕ ಹಾಗೂ ಕನ್ನಡ ಗಣಕ ಪ್ರತಿಷ್ಠಾನ ದ ಕಾರ್ಯದರ್ಶಿ ಶ್ರೀ ಜಿ ಎನ್ ನರಸಿಂಹಮೂರ್ತಿ ಯವರು ಆ ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ಸಂಗೀತಗಾರರ ಜೀವನ,ಸಂಗೀತ ಶಾಸ್ತ್ರದ ವಿವರಗಳನ್ನು ಸಭಿಕರಿಗೆ ವಿವರವಾಗಿ ತಿಳಿಸಿದರು.
ಪ್ರತಿ ಪ್ರಬಂಧ ಮಂಡನೆಯನಂತರ ಡಾ||ಪದ್ಮನಾಭ ರು ಕೃತಿರಚನೆಯ ಹಿನ್ನೆಲೆಯನ್ನು ಸಭೆಗೆ ವಿವರಿಸುವುದರ ಜೊತೆಗೆ ಅವರ ಸಂಗೀತ ಸುಧೆಹರಿಸಿ ಸಭಿಕರ ಮನ ತಣಿಸಿದರು. ಡಾ|| ಪದ್ಮನಾಭರ ಶಿಷ್ಯರಾದ,
ವಿದುಷಿ ಅಕ್ಷತಾ, ವಿದ್ವಾನ್ ದೀಪಕ್, ವಿದುಷಿ ಅರ್ಚನ, ವಿದುಷಿ ಭವ್ಯ, ವಿದ್ವಾನ್ ಅಕ್ಷಯ್, ಹಾಗೂ ವಿದ್ವಾನ್ ಅಭಿಷೇಕ್ ಅವರು ಡಾ|| ಪದ್ಮನಾಭ ರು ರಚಿಸಿರುವ ಹೊಸ ರಾಗಗಳಲ್ಲಿರುವ ರಚನೆಗಳನ್ನು ಹಾಡುವ ಮೂಲಕ ಪ್ರಸ್ತುತ ಪಡಿಸಿದರು.
ಸಭೆಯಅಧ್ಯಕ್ಷತೆಯನ್ನು, ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಅಧ್ಯಕ್ಷ, ಕವಿ ಶ್ರೀ ಬೆಂ. ಶ್ರೀ. ರವೀಂದ್ರ ಅವರು ವಹಿಸಿದ್ದು , ತಮ್ಮ ಅಧ್ಯಕ್ಷ ಭಾಷಣದಲ್ಲಿ ಇಂದು ಮಂಡಿಸಲಾದ ಪ್ರಬಂಧಗಳನ್ನು ಶೀಘ್ರದಲ್ಲೇ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿ,ಆ ಮೂಲಕ ಈ ವಿಚಾರಸಂಕಿರಣದಲ್ಲಿ ಮಂಡಿಸಲಾದ ವಿಚಾರಗಳನ್ನು ಹೆಚ್ಚಿನ ಜನರಿಗೆ ತಲುಪಿಸಲಾಗುವುದೆಂದು ತಿಳಿಸಿದರು. ಡಾ|| ಆರ್. ಕೆ .ಪದ್ಮನಾಭ ರು ತಾವೇ ರಚಿಸಿರುವ ಮಂತ್ರಾಲಯದ ಗುರು ರಾಘವೇಂದ್ರರ ಬಗ್ಗೆ ರಚಿಸಿರುವ ಪ್ರಾರ್ಥನಾ ಗೀತೆಯ ಗಾಯನದೊಂದಿಗೆ ಸಭೆಗೆ ಚಾಲನೆ ನೀಡಿದರು.
ಸಮನ್ವಯ ಸಮಿತಿ, ಕನ್ನಡವೇ ಸತ್ಯ ಪ್ರತಿಷ್ಠಾನದ, ಪದಾಧಿಕಾರಿಗಳಾದ ಶ್ರೀ ರವಿ ಕುಸುಬಿ ಅವರು ಸಭೆಗೆ ಆಗಮಿಸಿದ್ದ ಎಲ್ಲರಿಗೂ ಸ್ವಾಗತ ಕೋರಿದರೆ, ಶ್ರೀ ಹು ವಾ ಶ್ರೀ ಪ್ರಕಾಶ್ ಅವರು,ಭಾಗವಹಿಸಿದ ಎಲ್ಲರಿಗೆ, ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ವಂದನೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಶ್ರೀ. ಶ್ರೀ ರಂಗರಾಜನ್ ಅಚ್ಚುಕಟ್ಟಾಗಿ ನಿರ್ವಹಿಸಿದರು. ಬೆಳಿಗ್ಗೆ ೧೦ ಗಂಟೆಗೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ ೨ ಗಂಟೆಯವರೆಗೆ, ನಾಲ್ಕು ಗಂಟೆಗೂ ಹೆಚ್ಚುಕಾಲ ನಡೆದರೂ ಸಭಾಂಗಣ, ಸಂಪೂರ್ಣವಾಗಿ ಕೊನೆಯವರೆಗೆ ತುಂಬಿದ್ದು ಆಯೋಜಕರಿಗೆ ಸಂತಸ ತಂದಿತು.





























































