ಬೆಂಗಳೂರು, ನವೆಂಬೆರ್ 4: ಸುಮಾರು 10 ರಿಂದ 20 ವರ್ಷಗಳಿಂದ ಡೇರೆ, ಗುಡಾರ, ಟೆಂಟ್ ಹಾಕಿ ವಾಸಿಸುತ್ತಿರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ನೀಡಬೇಕು ಎಂದು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ ಮಾಜಿ ಅಧ್ಯಕ್ಷ ರವೀಂದ್ರರೆಡ್ಡಿ ಹೇಳಿದರು.
ಇದರ ಬಗ್ಗೆ ಅವರು ಸುದ್ದಿಗಾರರೊಂದಿಗೆ ಹೇಳಿದ್ದು: ಹಿಂದುಳಿದ ವರ್ಗ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ಜನಾಂಗದಲ್ಲಿ 46 ಜಾತಿಗಳಿದ್ದು, ಇವರು ನಿವೇಶನ ರಹಿತರಾಗಿದ್ದು ಡೇರೆ, ಟೆಂಟ್‌ಗಳನ್ನು ಉಪಯೋಗಿಸಿ ಅತ್ಯಂತ ಶೋಚನೀಯವಾಗಿ ಜೀವನ ಸಾಗಿಸುವವರಾಗಿದ್ದಾರೆ. ಈ ಜನಾಂಗದವರಿಗೆ ನಿವೇಶನ, ವಸತಿ, ಶಿಕ್ಷಣ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೀಡಿ ಇವರು ಕೂಡ ಇತರರಂತೆ ಮುಖ್ಯವಾಹಿನಿಗೆ ಬರುವುದರ ಮೂಲಕ ಸ್ವಾಭಿಮಾನದ ಬದುಕು ಸಾಗಿಸಲು ನಮ್ಮ ಸರಕಾರ ವಿಶೇಷ ಸೌಲಭ್ಯಗಳನ್ನು ನೀಡಬೇಕಾಗಿ ವಿನಂತಿಸುತ್ತೇವೆ, ಅಲೆಮಾರಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರ ಮೂಲ ಭೂತ ಸೌಕರ್ಯಗಳ ಕೊರತೆ ಬಗ್ಗೆ, ಅವರ
ಬೇಡಿಕೆಗಳಾದ ತಮ್ಮ ಮಕ್ಕಳ ಶಿಕ್ಷಣ ವ್ಯವಸ್ಥೆ, ನಿವೇಶನ–ವಸತಿ ರಹಿತರಿಗೆ ಸೌಲಭ್ಯವನ್ನು ಒದಗಿಸಬೇಕಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯ ಭವನ, ರುದ್ರ ಭೂಮಿಗಾಗಿ ಸರಕಾರಿ ಸ್ಥಳ ಗುರುತಿಸುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ದೊರೆಯುವ ಸಾಲ ಸೌಲಭ್ಯ, ಅಲೆಮಾರಿ ರೈತರ ನೀರಾವರಿಗೆ ಗಂಗಾ ಯೋಜನೆ ಉದ್ಯಮ ಶೀಲತಾ ತರಬೇತಿ ಕಾರ್ಯಕ್ರಮ, ಅಲೆಮಾರಿ ಕೃಷಿಕರು ಸ್ಥಿರವಾಗಿ ನೆಲೆಸಲು ಭೂ ಖರೀದಿ ಯೋಜನೆಗಳು ಅರ್ಹರಿಗೆ ಸಿಗುವಂತೆ ಸರಿಯಾಗಿ ಕ್ರಮಕೈಗೊಳ್ಳಬೇಕಾಗಿದೆ. ನಾನು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದಾಗ ನಮ್ಮ ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು, ಗ್ರಾಮಗಳಿಗೆ ಭೇಟಿ ನೀಡಿ ಅಲೆಮಾರಿ ಜನರ ಸಮಸ್ಯೆಗಳನ್ನು ಕಣ್ಣಾರೆ ನೋಡಿದ್ದೇನೆ. ಈ ಜನಾಂಗದವರು ತಮ್ಮ ಜೀವನೋಪಾಯಕ್ಕಾಗಿ ಹಳ್ಳಿಗಳಿಗೆ ತೆರಳಿ ಬಾಂಡೆ ವ್ಯಾಪಾರ, ಸೂಜಿ ದಾರ, ಪಿನ್ನು, ಟೇಪು, ಬೀಗ ರಿಪೇರಿ ಮಾಡುವ ಕೆಲಸ ಮಾಡುತ್ತಾರೆ. ಅಲ್ಲದೆ ದನ, ಕುರಿ, ಮೇಕೆ ಸಾಕಾಣಿಕೆ, ಬಲೆ ಹೆಣೆಯುವುದು, ಮೀನು ಹಿಡಿದು ಮಾರುವುದು, ಗಿಣಿ ಲಕ್ಷಣ, ಭವಿಷ್ಯ ಹೇಳುವುದು, ಬಳೆ ಮಾರುವುದು, ಪ್ಲಾಸ್ಟಿಕ್ ವಸ್ತುಗಳನ್ನು ಮಾರುತ್ತಾ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕಷ್ಟಕರ ಜೀವನ ನಡೆಸುತ್ತಿದ್ದಾರೆ.
ಪ್ರತೀ ದಿನ ದುಡಿದು ಉಪಜೀವನ ನಡೆಸುತ್ತಿರುವ ಇವರು ಕಡು ಬಡವರಾಗಿದ್ದು ನಿವೇಶನ ಕೊಳ್ಳಲು ಶಕ್ತರಾಗಿಲ್ಲ ಈ ರೀತಿಯಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತೀ ಹಿಂದುಳಿದವರಾದ ಇವರಿಗೆ ಸರಕಾರ ಸರ್ವ ರೀತಿಯಲ್ಲಿ ಸೌಲಭ್ಯವನ್ನು ನೀಡಬೇಕಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರಕಾರಿ ಜಾಗದಲ್ಲಿ ಸುಮಾರು 10 ರಿಂದ 20 ವರ್ಷಗಳಿಂದ ಡೇರೆ, ಗುಡಾರ, ಟೆಂಟ್ ಹಾಕಿ ವಾಸಿಸುತ್ತಿರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ನೀಡಬೇಕು. ಅಲೆಮಾರಿ ಜನರ ಜನಗಣತಿ ನಡೆಸಬೇಕು. ನಮ್ಮ ರಾಜ್ಯದಲ್ಲಿ ಹಿಂದುಳಿದ ವರ್ಗದ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಸುಮಾರು 75 ಲಕ್ಷ 3 ಜನರಿದ್ದಾರೆಂದು ಈ ಜನಾಂಗದ ಮುಖಂಡರು ಹೇಳುವ ಪ್ರಕಾರ ತಿಳಿದುಬರುತ್ತದೆ. ಇವರಲ್ಲಿ ಶೇಕಡ 95ರಷ್ಟು ಜನ ನಿರ್ಗತಿಕರಾಗಿ ಸರಕಾರದ ಸೌಲಭ್ಯ ವಂಚಿತರಾಗಿದ್ದಾರೆ. ಶಾಲೆಗೆ ಹೋಗುತ್ತಿರುವ ಅಲೆಮಾರಿ ಜನಾಂಗದ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡುವಾಗ ಅವರ ಜಾತಿ ಮತ್ತು ಅಲೆಮಾರಿ/ಅರೆ ಅಲೆಮಾರಿ ಎಂದು ನಮೂದಿಸಲು ಸರಕಾರ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಬೇಕೆಂದು ‘ಕರ್ನಾಟಕ ರಾಜ್ಯ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಉಪಾಧ್ಯಕ್ಷ ಬಿ.ವಿ. ಚಂದ್ರಯ್ಯ, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಒ ಜೋಗಿ, ಕೋಶಾಧಿಕಾರಿ ಹುಲ್ಲಪ್ಪ ಅಪ್ಪಣ್ಣ ಜಾಡ, ಪ್ರಧಾನ ಸಂಚಾಲಕರು ಪ್ರಕಾಶ್ ಎಂ, ಯುವ ವಿಭಾಗದ ಅಧ್ಯಕ್ಷ ಸಚಿನ್ ದಳವಾಯಿ, ತುಹಿಳಾ ವಿಭಾಗದ ಜೋತಿ ಮುಂತಾದವರು ಉಪಸ್ಥಿತರಿದ್ದರು.