ಬೆಂಗಳೂರು, ಅ, 30: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶ ರಕ್ಷಣೆಗೆ ಹೋರಾಟ ಮಾಡಿದ ನಾಡಿನ ನಿವೃತ್ತ ಯೋಧರನ್ನು ಕರುನಾಡ ಜನಸ್ಪಂದನಾ ವೇದಿಕೆಯಿಂದ ಗೌರವಿಸಲಾಯಿತು.
ನಯನ ಸಭಾಂಗಣದಲ್ಲಿ ವೇದಿಕೆ ಐದನೇ ವರ್ಷದ ವಾರ್ಷಿಕ ಸಮಾರಂಭದ ಅಂಗವಾಗಿ ನಿವೃತ್ತ ಯೋಧರು, ಶಿಕ್ಷಕರು, ಕಲಾವಿದರು, ಸಮಾಜಸೇವಕರು, ಹೋರಾಟಗಾರರನ್ನು ಸನ್ಮಾನಿಸಿ ಮಾತನಾಡಿದ ಕೋಲಾರ ಡಿವೈಎಸ್ಪಿ ರಮೇಶ್, ಯುದ್ಧ ಮತ್ತು ಶಾಂತಿಕಾಲದಲ್ಲಿ ಜನರ ರಕ್ಷಣೆಗೆ ಸೇವೆ ಸಲ್ಲಿಸುವ ಯೋಧರ ಕೊಡುಗೆ ಅನನ್ಯ ಎಂದು ಹೇಳಿದರು.
ಪತ್ರಕರ್ತ ವಿ.ನಂಜುಂಡಪ್ಪ ಮಾತನಾಡಿ, ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದವರನ್ನು ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ. ಈ ಬಾರಿ ರಾಜ್ಯೋತ್ಸವವನ್ನು ವರ್ಷ ಪೂರ್ತಿ ಆಚರಿಸುತ್ತಿದ್ದು, ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ಎಂದರು.
ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್ ಬಿ.ಪಿ ರವರು ಮಾತನಾಡಿ ನಮ್ಮ ಕರುನಾಡ ಜನಸ್ಪಂದನ ವೇದಿಕೆಯ ಹೆಸರೇ ತಿಳಿಸುವಂತೆ ಜನಸ್ಪಂದಯೇ ನಮ್ಮ ಮೂಲ ಉದ್ದೇಶವಾಗಿದೆ. ನಮ್ಮ ವೇದಿಕೆಯು 5 ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಅದರಂತೆ ಈ ಕಾರ್ಯಕ್ರಮವು ಮುಖ್ಯವಾಗಿ ನಮ್ಮ ವೀರಯೋಧರಿಗಾಗಿ ಆಯೋಜಿಸಲಾಗಿದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಗಣ್ಯರಿಗೂ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ 80ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ನಟರಾದ ಗಣೇಶ್ ರಾವ್, ಸಂಜೆ ಸಮಾಚಾರ ಪತ್ರಿಕೆಯ ಸಂಪಾದಕರಾದ ಬಿ.ಎ ಮಹೇಂದ್ರ, ಲಯನ್ ಮನೋಜ್ ಕುಮಾರ್, ಎಂ.ಎಸ್ ರಾಮಕೃಷ್ಣಪ್ಪ, ನಿವೃತ್ತ ಯೋಧರಾದ ಕುಮಾರಸ್ವಾಮಿ, ಭಾಗ್ಯಶ್ರೀ, ಹಿರಿಯ ಹೋರಾಟಗಾರರಾದ ನಾಗಲೇಖ, ಜಿ.ಚಂದ್ರಶೇಖರ್, ನಕಿರೇಕಂಟೆ ಸ್ವಾಮಿ, ಗೋವಿಂದಹಳ್ಳಿ ಕೃಷ್ಣೇಗೌಡರು, ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್ ಬಿ.ಪಿ, ಮಹೇಶ್ ಕುಮಾರ್, ಮಧು ಎನ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.