ಬೆಂಗಳೂರು, ಆ, 11: ಅರಣ್ಯ, ಹಸಿರು ಪ್ರದೇಶ ಕಡಿಮೆಯಾಗುತ್ತಿದ್ದು, ಮಾಲೀನ್ಯದಿಂದ ಕ್ಯಾನ್ಸರ್ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಗರ ಪ್ರದೇಶದ ಜನತೆ ಎಚ್ಚೆತ್ತುಕೊಂಡು ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.
ಎಚ್.ಎಸ್.ಆರ್ ಬಡಾವಣೆಯ ದಿ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಸಂಪಾದಕತ್ವದ “ಚಿಣ್ಣರ ಚೇತನ” ಗೋಡೆ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೂಲಭೂತ ಗಂಭೀರ ಮಾಲೀನ್ಯ ಸಮಸ್ಯೆಗಳ ಬಗ್ಗೆ ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ವಿನಾಶದೆಡೆಗೆ ಸಾಗುತ್ತೇವೆ. ಸಮಸ್ಯೆಗಳನ್ನು ನಿವಾರಿಸಲು ಮುಂದಾಗದಿದ್ದರೆ ಮತ್ತೊಬ್ಬರಿಗೆ ಸಲಹೆ ನೀಡುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಜಲ, ವಾಯು, ಪರಿಸರ, ಆಹಾರ ಮಾಲೀನ್ಯದಂತಹ ಅಗಾಧ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತಿವೆ. ಮಾಲೀನ್ಯದಿಂದ ವಿಮುಖರಾಗಿ ಸುಸ್ಥಿರ ಪರಿಸರದತ್ತ ಸಾಗಲು ಇದು ಸಕಾಲ ಎಂದರು.
ಮಾಲೀನ್ಯ ಸಮಸ್ಯೆಗಳ ನಿವಾರಣೆ ಮತ್ತು ಪ್ರಕೃತಿ ಪ್ರೇಮ ಬೆಳೆಸಿಕೊಳ್ಳಲು “ಚಿಣ್ಣರ ಚೇತನ” ಗೋಡೆ ಪತ್ರಿಕೆ ಅತ್ಯಂತ ಉಪಯುಕ್ತವಾಗಿದೆ. ಪತ್ರಿಕೆಯ ಒಂದೊಂದು ಲೇಖನ ಸಂಗ್ರಹ ಯೋಗ್ಯ. ಅಷ್ಟೇ ಅಲ್ಲದೇ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿದೆ. ಪ್ರತಿ ತಿಂಗಳು ಹೊಸ ಹೊಸ ವಿಷಯಗಳು ಬೆಳಕಿಗೆ ತರುತ್ತಿದ್ದು, “ಇರುವೆ ಬದುಕಿದರೆ ಹೇಗೆ ಆನೆಗೆ ಆಹಾರ ದೊರೆಯುತ್ತದೆ” ಎಂಬ ಸಣ್ಣ ಸಂಗತಿಗಳಿಂದ ಹಿಡಿದು ಗಂಭೀರ ಸ್ವರೂಪದ ಸಮಸ್ಯೆಗಳವರೆಗೆ ಹತ್ತು ಹಲವು ಕೌತುಗಳನ್ನು ಪತ್ರಿಕೆ ಅನಾವರಣಗೊಳಿಸುತ್ತಿದೆ. ದಿ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಯ ಜೊತೆ ಪರಿಸರಕ್ಕೆ ಸಂಬಂಧಿಸಿದಂತೆ ಹಲವು ರಚನಾತ್ಮಕ ಕಾರ್ಯಕ್ರಮಗಳ ಜಾರಿಗಾಗಿ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧ ಎಂದರು.
ತ್ಯಾಜ್ಯ ಸಮಸ್ಯೆಯಿಂದ ಮುಕ್ತರಾಗಬೇಕು. ಶೂನ್ಯ ತ್ಯಾಜ್ಯದತ್ತ ಗಮನ ಹರಿಸಬೇಕು. ಬೆಂಗಳೂರಿನಂತಹ ನಗರಕ್ಕೆ ಸೂಕ್ತ ಆಮ್ಲಜನಕ ಒದಗಿಸುವುದು ಅತ್ಯಂತ ಜರೂರಾಗಿದೆ. ಹೀಗೆ ಯಾವುದೇ ಆಂದೋಲನ, ಯಾವುದೇ ಸಂಘಟನೆಗಳಿಗೆ ಸ್ವಯಂ ಸೇವಕರು ಆಧಾರ ಸ್ತಂಭವಾಗಿದ್ದು, ಎಲ್ಲಾ ಪಾಲುದಾರರನ್ನೊಳಗೊಂಡು ಮುನ್ನಡೆದಾಗ ಯಶಸ್ಸು ಗಳಿಸಲು ಸಾಧ್ಯ ಎಂದು ಡಾ. ತೇಜಸ್ವಿನಿ ಅನಂತ್ ಕುಮಾರ್ ಹೇಳಿದರು.
ಬಿಬಿಎಂಪಿ ಮಾಜಿ ಸದಸ್ಯ ಗುರುಮೂರ್ತಿ ರೆಡ್ಡಿ, ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷರಾದ ವಿಜಯ ಲಕ್ಷ್ಮಿ, ಎನ್.ಡಿ.ಆರ್.ಐ ಮಾಜಿ ನಿರ್ದೇಶಕ ಡಾ.ಕೆ.ಪಿ. ರಮೇಶ್, ದಿ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್.ಎನ್.ವಿ.ಎಲ್. ನರಸಿಂಹ ರಾಜು, ಆಕ್ಸ್ ಫರ್ಡ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಡಾ. ನಿಕಿತಾ ಆಲೂರ್, ಆಕ್ಸ್ ಫರ್ಡ್ ಕಾಲೇಜ್ ಆಫ್ ಸೈನ್ಸ್ ನ ಪ್ರಾಂಶುಪಾಲರಾದ ಡಾ. ಕಾವ್ಯಶ್ರೀ, ಆಕ್ಸ್ ಫರ್ಡ್ ಕಾಲೇಜ್ ಆಫ್ ಆರ್ಟ್ಸ್ ನ ಪ್ರಾಂಶುಪಾಲರಾದ ಗಾಯತ್ರಿ, ಆಕ್ಸ್ ಫರ್ಡ್ ಕಾಲೇಜ್ ಆಫ್ ಲಾ ಪ್ರಾಂಶುಪಾಲರಾದ ಡಾ. ಪ್ರಜ್ಞಾ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.