ಬೆಂಗಳೂರು, ಸೆ, 5: ರಾಷ್ಟ್ರೀಯ ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ದಿ ನ್ಯಾಷನಲ್ ಎಜುಕೇಶನ್ ಸೋಸೈಟಿ ಆಫ್ ಕರ್ನಾಟಕ”ದಿಂದ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಬಸವನಗುಡಿಯ ಡಾ.ಎಚ್.ಎನ್. ಮಲ್ಟಿ ಮೀಡಿಯಾ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ ಅವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, “ಒಮ್ಮೆ ಶಿಕ್ಷಕರಾದವರು ಜೀವನ ಪರ್ಯಂತ ಶಿಕ್ಷಕರಾಗಿರುತ್ತಾರೆ. ಸಮಾಜಕ್ಕೆ ಅವರು ಒಂದಲ್ಲಾ ಒಂದು ರೀತಿ ಮಾರ್ಗದರ್ಶಕರು. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಬದುಕಿನಲ್ಲಿ ನಮಗೆ ಮಾರ್ಗದರ್ಶನ ಮಾಡಿದ ಶಿಕ್ಷಕರು ಸ್ಮರಣೀಯ, ಅವರನ್ನು ಗೌರವಿಸುವುದು ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳು ಮತ್ತು ಸಮಾಜದ ಕರ್ತವ್ಯ” ಎಂದರು.
ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿ. ವೆಂಕಟಶಿವಾ ರೆಡ್ಡಿ ಮಾತನಾಡಿ, ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆಗಳನ್ನು ಸ್ಮರಿಸುವುದು ರಾಷ್ಟ್ರೀಯ ಶಿಕ್ಷಕರ ದಿನದ ಉದ್ದೇಶವಾಗಿದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದವರನ್ನು ನಾವೆಲ್ಲರೂ ಸಂಸ್ಮರಣೆ ಮಾಡಬೇಕು ಎಂದರು.
ನಿವೃತ್ತ ಬೋಧಕರಾದ ಅನಂತ ರಂಗನ್, ಡಾ. ಶೈರೀನ್ ನೇದುಂಗಡಿ, ಅರುಣಾಚಲಂ, ಡಾ.ಎಚ್.ಜಿ. ಗೋಕುಲ್, ಸೋನಾರ್ ಮಾರುತಿ, ಜಯರಾಮಪ್ಪ, ಡಿ.ವಿ. ನಾಗೇಶ್, ಎಸ್.ಆರ್. ಪಂಕಜಾ, ಎ.ಜಿ. ನಾಗರಾಜಯ್ಯ ಅವರನ್ನು ಸನ್ಮಾನಿಸಲಾಯಿತು.
ಎನ್.ಇ.ಎಸ್ ಶಿಕ್ಷಣ ಸಂಸ್ಥೆಯ ಖಜಾಂಚಿ ವಿ. ಮಂಜುನಾಥ್, ಎನ್.ಸಿ.ಜೆ ಅಧ್ಯಕ್ಷ ಕೆ.ಎನ್. ರಾಮ್ ಮೋಹನ್ ಎನ್.ಇ.ಪಿ.ಎಸ್. ಅಧ್ಯಕ್ಷ ಜೆ. ಪಾವನ ಮತ್ತಿತರರು ಉಪಸ್ಥಿತರಿದ್ದರು.