ಬೆಂಗಳೂರು ನವೆಂಬರ್ 1: ಅಂತರ್ ಕಾಲೇಜು ನಾಟಕ ಸ್ಪರ್ಧೆಗಳು ಹೊಸ ಕಲಾವಿದರನ್ನ ಹುಟ್ಟು ಹಾಕುವ ವೇದಿಕೆಗಳು. ಇಂತಹ ಅಂತರ್ ಕಾಲೇಜು ಸ್ಪರ್ಧೆಯ ವೇದಿಕೆಯಿಂದಲೇ ನಾನು ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು, ಇಂತಹ ವೇದಿಕೆಗಳನ್ನ ತಮ್ಮ ಕಲೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳು ಸಕ್ರಿಯವಾಗಿ ಬಳಸಿಕೊಳ್ಳಬೇಕು ಎಂದು ಖ್ಯಾತ ಬಹುಭಾಷ ನಟ ಹಾಗೂ ರಂಗಕರ್ಮಿ ಪ್ರಮೋದ್ ಶೆಟ್ಟಿ ಕರೆ ನೀಡಿದರು.
ಇಂದು ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ನಾಟಕ ಸ್ಪರ್ಧೆ ರಂಗವೈಭವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಅವಕಾಶಗಳನ್ನು ಒದಗಿಸುತ್ತದೆ. ಇಂತಹ ಉತ್ತಮ ಅವಕಾಶಗಳಲ್ಲಿ ನಾಟಕ ಸ್ಪರ್ಧೆಯೂ ಕೂಡಾ ಒಂದು. 24 ವರ್ಷಗಳ ಹಿಂದೆ ಇದೇರೀತಿಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ರಂಗಭೂಮಿಗೆ ನಾನು ಪಾದಾರ್ಪಣೆ ಮಾಡಿದೆ. ಇಂದು ಈ ಮಟ್ಟಕ್ಕೆ ತಲುಪುವ ನಿಟ್ಟಿನಲ್ಲಿ ಅಂದಿನ ನಾಟಕ ತಂಡ ಹಾಗೂ ರಂಗಭೂಮಿಯ ಕೊಡುಗೆ ಅಪಾರ. ರಂಗಭೂಮಿಯ ಕಲಾವಿದರು ನಾಟಕಗಳನ್ನ ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಆರೋಪ ಸುಳ್ಳು. ತಮ್ಮ ಕಾರ್ಯಾಭಾರಗಳಿಂದ ಸಕ್ರೀಯವಾಗಿ ನಾಟಕಗಳಲ್ಲಿ ನಟಿಸದೇ ಇದ್ದರೂ, ವೇದಿಕೆಯ ಹಿಂಭಾಗದ ಹಲವಾರು ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ರಂಗಭೂಮಿ ನಿರಂತರ ಕಲಿಕೆಯ ಜಾಗ. ಪ್ರತಿಯೋಂದು ಹೊಸ ನಾಟಕ, ಹೊಸ ಪ್ರಯೋಗವಾಗಿದ್ದು ಹೊಸದನ್ನು ಕಲಿಯುವ ಅವಕಾಶ ಒದಗಿಸಿಕೊಡುತ್ತದೆ. ಇಲ್ಲಿ ಕಲಿತಿದ್ದನ್ನ ನಾವು ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಳವಡಿಸಿಕೊಳ್ಳುತ್ತೇವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಸಿಗುವಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ನ್ಯಾಷನಲ್ ಎಜುಕೇಷನಲ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷರಾದ ಡಾ. ಹೆಚ್.ಎನ್ ಸುಬ್ರಮಣ್ಯ ಮಾತನಾಡಿ, ಡಾ. ಎಚ್. ನರಸಿಂಹಯ್ಯ ಅವರ ಮಾರ್ಗದರ್ಶನದಲ್ಲಿ ನ್ಯಾಷನಲ್ ಕಾಲೇಜು ಮೊದಲಿನಿಂದಲೂ ರಂಗಭೂಮಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ನ್ಯಾಷನಲ್ ಕಾಲೇಜಿನ ನಾಟಕ ಸ್ಪರ್ದೇಗಳಲ್ಲಿ ಭಾಗವಹಿಸಿದ್ದ ಹಲವಾರು ವಿದ್ಯಾರ್ಥಿಗಳು ಪ್ರಮುಖ ಕಲಾವಿದರಾಗಿ ಹೊರ ಹೊಮ್ಮುವ ಮೂಲಕ ಕಾಲೇಜಿನ ಖ್ಯಾತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ ಎಂದರು.
ಖ್ಯಾತ ನಟಿ ಗಿರಿಜಾ ಲೋಕೇಶ್ ಮಾತನಾಡಿ, ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದಷ್ಟೇ ಅಲ್ಲ ಭಾಗವಹಿಸುವುದು ಅಷ್ಟೇ ಮುಖ್ಯ. ನನ್ನ ಮಗ ಸೃಜನ್ ಲೋಕೇಶ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ. ಕಾಲೇಜಿನಲ್ಲಿ ಓದಿನ ಜೊತೆಯಲ್ಲೇ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತನ್ನದೇ ಆದ ಖ್ಯಾತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈಗಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಹಾಗೂ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಉತ್ತಮ ಅವಕಾಶಗಳೀವೆ. ಅವುಗಳನ್ನ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
5 ದಿನಗಳ ಕಾಲ ನಡೆದ ನಾಟಕ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವನ್ನ ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಪಡೆದುಕೊಂಡರೆ, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಎರಡನೇ ಬಹುಮಾನ ಪಡೆದುಕೊಂಡರು. ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎನ್.ಇ.ಎಸ್ ಕರ್ನಾಟಕದ ಕಾರ್ಯದರ್ಶಿಗಳಾದ ವೆಂಕಟಶಿವಾರೆಡ್ಡಿ, ನ್ಯಾಷನಲ್ ಕಾಲೇಜು ಜಯನಗರದ ಅಧ್ಯಕ್ಷರಾದ ಪಿ.ಎಲ್ ವೆಂಕಟರಾಮರೆಡ್ಡಿ ಉಪಸ್ಥಿತರಿದ್ದರು.