ಬೆಂಗಳೂರು, ಜನವರಿ 29: ದಾವೋಸ್‌ನಲ್ಲಿ ನಡೆದ 2026 ರ ವಿಶ್ವ ಆರ್ಥಿಕ ವೇದಿಕೆಯ (ವರ್ಲ್ಡ್ ಎಕನಾಮಿಕ್ ಫೋರಮ್) ವಾರ್ಷಿಕ ಸಭೆಯ ಸಂದರ್ಭದಲ್ಲಿ ಪ್ರೊಮೆನೇಡ್ ಸ್ಟ್ರೀಟ್‌ನಲ್ಲಿರುವ ರಾಟಿಯಾ ಸೆಂಟರ್ ಬಳಿ ವಿಶೇಷ ಆಹಾರ ಕಿಯೋಸ್ಕ್ ಸ್ಥಾಪಿಸುವ ಮೂಲಕ ಅಕ್ಷಯ ಪಾತ್ರ ಫೌಂಡೇಶನ್ ತಾಜಾ ಮತ್ತು ಆರೋಗ್ಯಕರ ಬಿಸಿಯೂಟವನ್ನು ಬಡಿಸುವ ಯೋಜನೆಯನ್ನು ಕೈಗೊಂಡಿತು. ಪ್ರತಿದಿನ ವೇದಿಕೆಗೆ ಭೇಟಿ ನೀಡುವ ಸಾವಿರಕ್ಕೂ ಹೆಚ್ಚು ಜನರಿಗೆ ಬಿಸಿಯೂಟವನ್ನು ಬಡಿಸುವ ಮೂಲಕ, ಆಹಾರ ವಿತರಣೆಯು ಮಾನವೀಯತೆ, ಸಂವಾದ ಮತ್ತು ಸತ್ಕಾರ್ಯಕ್ಕೆ ಹೇಗೆ ಪ್ರಬಲ ಪ್ರೇರಕವಾಗಬಹುದು ಎಂಬುದನ್ನು ಪ್ರದರ್ಶಿಸಿದೆ. ಅಕ್ಷಯ ಪಾತ್ರೆಯ ಈ ಪ್ರಯತ್ನವು ಮಕ್ಕಳು ಮತ್ತು ಸಮುದಾಯಗಳಿಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು ಒದಗಿಸುವ ಈ ಸಂಸ್ಥೆಯ ಯೋಜನೆಗಳ ಬಗ್ಗೆ ವಿಶ್ವದ ಹಲವು ನಾಯಕರು ಮತ್ತು ಪ್ರಭಾವಿ ವ್ಯಕ್ತಿಗಳ ಗಮನವನ್ನು ಸೆಳೆಯಿತು.
ಈ ಕಿಯೋಸ್ಕ್ ಅನ್ನು ಸಿಐಐನ ಮಹಾನಿರ್ದೇಶಕರಾದ ಶ್ರೀ ಚಂದ್ರಜಿತ್ ಬ್ಯಾನರ್ಜಿ ಅವರು ಉದ್ಘಾಟಿಸಿದರು. ಭಾರತದ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ಕಿಯೋಸ್ಕ್‌ಗೆ ಭೇಟಿ ನೀಡಿ, ಆಹಾರದ ಸರಳತೆ ಮತ್ತು ಪೌಷ್ಟಿಕ ಮೌಲ್ಯವನ್ನು ಮೆಚ್ಚಿದರು. ಸ್ಕಿಟ್ಟರ್ಲ್ಯಾಂಡ್‌ನಲ್ಲಿನ ಭಾರತದ ಡೆಪ್ಯುಟಿ ಅಂಬಾಸೆಡರ್ ಶ್ರೀ ಅನೂಪ್ ಧಿಂಗ್ರಾ ಕೂಡ ಕಿಯೋಸ್ಕ್‌ಗೆ ಭೇಟಿ ನೀಡಿದರು. ಕಡು ಚಳಿಯ ನಡುವೆಯೂ ಅನೇಕ ದೇಶಗಳ ಪ್ರತಿನಿಧಿಗಳು, ನೀತಿ ನಿರ್ಣಯಕರು ಮತ್ತು ಉದ್ಯಮ ನಾಯಕರು ಇಲ್ಲಿ ಬಂದು ಭಾರತೀಯ ಆಹಾರವನ್ನು ಆಸ್ವಾದಿಸಿದರು.
ಅಕ್ಷಯ ಪಾತ್ರೆಯ ಕಿಯೋಸ್ಕ್ ಗೆ ಭೇಟಿ ನೀಡಿದ ಎಲ್ಲಾ ಗಣ್ಯರು ಶಾಲಾಮಕ್ಕಳಿಗೆ ಪೌಷ್ಟಿಕ ಬಿಸಿಯೂಟವನ್ನು ನೀಡುವ ಯೋಜನೆಯು ರಸ್ತೆಗಳು, ವಿದ್ಯುತ್, ಮತ್ತು ಡಿಜಿಟಲ್ ಸಂಪರ್ಕವನ್ನು ನೀಡುವಷ್ಟೇ ಮೂಲಭೂತ ಸೌಕರ್ಯವಂತಾಗಿ ಪರಿಗಣಿಸಬೇಕು ಎಂದು ಒಪ್ಪಿದರು. ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರ ದೊರೆತರೆ ಅವರ ಬುದ್ಧಿಶಕ್ತಿ, ಕಲಿಕೆ ಮತ್ತು ಭವಿಷ್ಯ ಉತ್ತಮವಾಗುತ್ತದೆ ಎಂಬ ಸಂದೇಶ ಇಲ್ಲಿ ಸ್ಪಷ್ಟವಾಯಿತು. ದಾವೋಸ್‌ನಲ್ಲಿ ಬಿಸಿಯೂಟ ವಿತರಣೆಯ ಈ ಕಾರ್ಯಕ್ರಮವನ್ನು ಭಾರತೀಯ ಸಂಸ್ಕೃತಿಯ ಅನ್ನದಾನ’ ಪರಂಪರೆಯ ಪ್ರತೀಕವಾಗಿ ಹಲವರು ಶ್ಲಾಘಿಸಿದರು. ಅಕ್ಷಯ ಪಾತ್ರೆಯ ಕಿಯೋಸ್ಕ್ ನ ಬಳಿ ನಡೆದ ಚರ್ಚೆಗಳು ಆಹಾರ ವ್ಯವಸ್ಥೆ, ಸಾರ್ವಜನಿಕ ಖಾಸಗಿ ಸಹಕಾರ ಮತ್ತು ಸಮಾಜದ ಅಭಿವೃದ್ಧಿ ಬಗ್ಗೆ ಮುಂದುವರಿದವು. ಈ ಕಾರ್ಯಕ್ರಮದ ಮೂಲಕ “ಯಾವುದೇ ಮಗು ಹಸಿವಿನ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಬಾರದು” ಎಂಬ ಅಕ್ಷಯ ಪಾತ್ರೆಯ ನಂಬಿಕೆಯನ್ನು ಜಗತ್ತಿಗೆ ತಿಳಿಸಲಾಯಿತು. ಮಕ್ಕಳ ಪೌಷ್ಟಿಕತೆಗೆ ಹೂಡಿಕೆ ಮಾಡುವುದು ದೇಶ ನಿರ್ಮಾಣಕ್ಕೂ, ಜಾಗತಿಕ ಅಭಿವೃದ್ಧಿಗೂ ಅತ್ಯಂತ ಅಗತ್ಯ ಎಂಬ ಸಂದೇಶವನ್ನು ಸಂಸ್ಥೆ ಪುನರುಚ್ಛರಿಸಿತು.
ಅಕ್ಷಯ ಪಾತ್ರೆಯು ಕಳೆದ 25 ವರ್ಷಗಳಿಂದ ಭಾರತ ಸರ್ಕಾರದ ಪಿಎಂ ಪೋಶಣ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇಂದು ಭಾರತದಲ್ಲಿ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿದಿನ ಸುಮಾರು 23 ಲಕ್ಷ ಮಕ್ಕಳಿಗೆ ಮಧ್ಯಾಹ್ನ ಊಟ ನೀಡುತ್ತಿದೆ. 2030ರೊಳಗೆ 30 ಲಕ್ಷ ಮಕ್ಕಳಿಗೆ ಆಹಾರ ನೀಡುವುದು ಸಂಸ್ಥೆಯ ಗುರಿ.
ದಾವೋಸ್‌ನ ಈ ಆಹಾರ ವಿತರಣೆಯ ಸೇವಾ ಕಾರ್ಯಕ್ರಮವನ್ನು ವರ್ಲ್ಡ್ ಫುಡ್ ಮೂವೆಂಟ್ (WFM)ನ ಜೊತೆಗೂಡಿ ನಡೆಸಲಾಯಿತು. ಅಕ್ಷಯ ಪಾತ್ರದ ಪ್ರೇರಣೆಯಿಂದ ಸ್ಥಾಪನೆಯಾದ WFM, ಅಮೇರಿಕಾ ಮತ್ತು ಇತರ ದೇಶಗಳಲ್ಲಿ ಮಕ್ಕಳ ಮತ್ತು ಸಮುದಾಯಗಳ ಪೌಷ್ಟಿಕತೆಗೆ ಕೆಲಸ ಮಾಡುತ್ತಿದೆ.
ಅಕ್ಷಯ ಪಾತ್ರೆಯ ಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸರು ಮಾತನಾಡುತ್ತಾ, “ಅಕ್ಷಯ ಪಾತ್ರೆ ಒಂದು ವಿಶಿಷ್ಟ ಸಾಮಾಜಿಕ ನವೀನ ಪ್ರಯೋಗ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಕಾರ, ತಂತ್ರಜ್ಞಾನ ಮತ್ತು ಉತ್ತಮ ಆಡಳಿತವನ್ನು ಒಟ್ಟುಗೂಡಿಸಿ, ಕಳೆದ 25 ವರ್ಷಗಳಿಂದ ನಾವು ಭಾರತೀಯ ಶಾಲಾ ಮಕ್ಕಳಿಗೆ ಬಿಸಿ ಹಾಗೂ ಪೌಷ್ಟಿಕ ಆಹಾರವನ್ನು ನೀಡುತ್ತಿದ್ದೇವೆ. ನಮ್ಮ ಅತ್ಯಾಧುನಿಕ, ವಿಶ್ವಮಟ್ಟದ ಅಡುಗೆಮನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಸಿ ವಿತರಿಸಲಾಗುತ್ತದೆ. ಅವುಗಳ ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಇಂದು ಜಗತ್ತಿನ ಹಲವು ದೇಶಗಳು ಅಧ್ಯಯನ ಮಾಡುತ್ತಿವೆ. ಅಕ್ಷಯ ಪಾತ್ರೆಯಲ್ಲಿ ನಾವು ಪಡೆದ ಅನುಭವ ಮತ್ತು ಜ್ಞಾನವನ್ನು, ವರ್ಲ್ಡ್ ಫುಡ್ ಮೂಲ್ಕೆಂಟ್ ತನ್ನ ವಿವಿಧ ಯೋಜನೆಗಳು ಮತ್ತು ಕಾರ್ಯಗಳಲ್ಲಿ ಬಳಸಿಕೊಳ್ಳಲಿದೆ.
ನಮ್ಮ ಕಿಯೋಸ್ಕ್‌ಗೆ ಭೇಟಿ ನೀಡಿ, ನಮ್ಮ ಆಹಾರ ಸೇವಾ ಕಾರ್ಯಕ್ಕೆ ಶುಭಾಶಯ, ಬೆಂಬಲ ಮತ್ತು ಪ್ರೋತ್ಸಾಹ ನೀಡಿದ ಎಲ್ಲರಿಗೂ ನಾವು ಹೃತ್ತೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಜ್ಞಾನ ಹಂಚಿಕೆ ಮತ್ತು ಮಕ್ಕಳ ಸಂಪೂರ್ಣ ಅಭಿವೃದ್ಧಿಗೆ ಸಹಕಾರ ಮತ್ತು ಪಾಲುದಾರಿಕೆಯು ಅತ್ಯಂತ ಅಗತ್ಯವೆಂದು ನಾವು ನಂಬಿದ್ದೇವೆ. ಜಗತ್ತಿನಾದ್ಯಂತ ಆಹಾರ ಭದ್ರತೆಗೆ ನಮ್ಮ ಕೊಡುಗೆಯನ್ನು ಹೆಚ್ಚಿಸಲು, ವಿವಿಧ ಸಂಸ್ಥೆಗಳೊಂದಿಗೆ ಕೈಜೋಡಿಸಲು ನಾವು ಸದಾ ಸಿದ್ದರಾಗಿದ್ದೇವೆ.”
ಜಾಗತಿಕ ಸಂವಹನ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ನವೀನ ನೀರದ ದಾಸರು, “ದಾವೋಸ್‌ನ ಚಳಿಯಲ್ಲಿ ಜನರು ನಮ್ಮ ಬಿಸಿಯೂಟವನ್ನು ಆಸ್ವಾದಿಸಿದ್ದು ನಮಗೆ ತುಂಬಾ ಸಂತಸ ತಂದಿದೆ. ಇಲ್ಲಿ ಆರಂಭವಾದ ಉತ್ತಮ ಚರ್ಚೆಗಳನ್ನು ಮುಂದುವರಿಸಿ, ಮಕ್ಕಳ ಮತ್ತು ಸಮಾಜದ ಹಿತಕ್ಕಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದರು.




























































