ಬೆಂಗಳೂರು ಸೆಪ್ಟೆಂಬರ್ 18: ಗಣೇಶ ಚುತುರ್ಥಿಗೆ ವಿಭಿನ್ನ ರೀತಿಯ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಲಾಗುತ್ತದೆ. ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನ ದೇಶದಲ್ಲೇ ಮೊದಲ ಬಾರಿಗೆ ಕೋಟಿ ಕೋಟಿ ಮೌಲ್ಯದ ನೋಟು ಮತ್ತು ನಾಣ್ಯಗಳನ್ನು ದೇವಸ್ಥಾನವನ್ನು ಆಲಂಕರಿಸಿದ್ದು, ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಪ್ರತಿ ಬಾರಿ ವಿಶೇಷ ಅನುಭವ ಹೊಸ ರೀತಿಯಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶ ಹೊಂದಿರುವ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನವರು ವಿಭಿನ್ನವಾದ ಆಲಂಕಾರವನ್ನು ಮಾಡಿದ್ದಾರೆ. ಈ ಬಾರಿ ಗಣೇಶ ಚತುರ್ಥಿಯ ಪ್ರಯುಕ್ತ ಸುಮಾರು 56 ಲಕ್ಷ ಮೌಲ್ಯದ 5,10 ಮತ್ತು 20 ರೂಪಾಯಿ ನಾಣ್ಯಗಳನ್ನು ಬಳಸಿ, 10,20,50,100,200 ಮತ್ತು 500 ರೂಪಾಯಿಗಳ ನೋಟ್‌ಗಳನ್ನು ಬಳಸಿಕೊಂಡು ಹೂವಿನಂತೆ ಮಾಲೆಗಳನ್ನು ಮಾಡುವ ಮೂಲಕ ಆಲಂಕಾರ ಮಾಡಲಾಗಿದೆ.
ಸರಿಸುಮಾರು 2.5 ಕೋಟಿ ಮೌಲ್ಯದ ನೋಟು ಮತ್ತು 56 ಲಕ್ಷ ಮೌಲ್ಯದ ನಾಣ್ಯಗಳ ಮೂಲಕ ಆಲಂಕಾರ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ 150 ಜನ ಈ ಆಲಂಕಾರ ಮಾಡಿದ್ದಾರೆ. ಯಾವುದೇ ಸಮಸ್ಯೆ ಆಗದಂತೆ ಸೆಕ್ಯೂರಿಟಿ ಮತ್ತು ಇಡೀ ದೇವಾಲಯದಲ್ಲಿ ಸಿಸಿಟಿವಿ ಅಳವಡಿಸಿದ್ದೇವೆ. ಇದೇ ವೇಳೆ, ನಾಣ್ಯಗಳಿಂದಲೇ ಗಣೇಶನ ಪೋಟೋ, ಜೈ ಕರ್ನಾಟಕ, ನೇಷನ್ ಫರ್ಸ್ಟ್, ವಿಕ್ರಮ್ ಲ್ಯಾಂಡರ್, ಚಂದ್ರಯಾನದ ಚಿತ್ರಗಳು ಮತ್ತು ಜೈ ಜವಾನ್ ಜೈ ಕಿಸಾನ್ ಚಿತ್ರಗಳನ್ನು ನಿರ್ಮಿಸಲಾಗಿದೆ. ಈ ಆಲಂಕಾರ ನೋಡಿ ಭಕ್ತರು ಭಕ್ತರು ಬಹಳ ಸಂತಸಗೊಂಡಿದ್ದಾರೆ ಎಂದು ಶ್ರೀ ಸತ್ಯ ಗಣಪತಿ ಶಿರಡಿ ಟ್ರಸ್ಟ್‌ನ ಟ್ರಸ್ಟಿಗಳಾದ ರಾಮ್ ಮೋಹನ್ ರಾಜು ತಿಳಿಸಿದರು.
ಈ ಆಲಂಕಾರ ಇನ್ನೂ ಒಂದು ವಾರಗಳ ಕಾಲ ಇರಲಿದ್ದು, ಭಕ್ತಾದಿಗಳು ದರುಶನ ಪಡೆಯಬಹುದಾಗಿದೆ ಎಂದು ಟಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.