Home Spiritual ಇಸ್ಕಾನ್ ಬೆಂಗಳೂರು ದೇವಸ್ಥಾನಗಳಲ್ಲಿ ಸಂಭ್ರಮದ ಶ್ರೀ ವೈಕುಂಠ ಏಕಾದಶಿ ಉತ್ಸವದ ಆಚರಣೆ

ಇಸ್ಕಾನ್ ಬೆಂಗಳೂರು ದೇವಸ್ಥಾನಗಳಲ್ಲಿ ಸಂಭ್ರಮದ ಶ್ರೀ ವೈಕುಂಠ ಏಕಾದಶಿ ಉತ್ಸವದ ಆಚರಣೆ

0

ಬೆಂಗಳೂರು, ಜನವರಿ ೧೦: ವೈಕುಂಠ ಏಕಾದಶಿಯ ಪಾವನ ದಿನದಂದು, ಇಸ್ಕಾನ್ ಬೆಂಗಳೂರಿನ ರಾಜಾಜಿನಗರ ಹಾಗೂ ವಸಂತಪುರದಲ್ಲಿರುವ ದೇವಾಲಯಗಳು, ಸಂಭ್ರಮದ ಭಕ್ತಿಯ ವಾತಾವರಣ ಮತ್ತು ಅವಿರತ ಗೋವಿಂದ ನಾಮಘೋಷಗಳಿಂದ ತುಂಬಿ ತುಳುಕುತ್ತಿದ್ದವು. ಈ ಶುಭದಿನದಂದು, ಲಕ್ಷಾಂತರ ಭಕ್ತರು, ಹರೇಕೃಷ್ಣ ಗಿರಿಯ ರಾಧಾಕೃಷ್ಣ ಮಂದಿರಕ್ಕೆ ಮತ್ತು ವೈಕುಂಠ ಗಿರಿಯ ರಾಜಾಧಿರಾಜ ಗೋವಿಂದ ಮಂದಿರಕ್ಕೆ ಭೇಟಿ ನೀಡಿದರು.

ದೇವಸ್ಥಾನಗಳನ್ನು ಅಲಂಕರಿಸಿದ್ದ ಬಣ್ಣಬಣ್ಣದ ಪರಿಮಳಯುಕ್ತ ಹೂವುಗಳು, ರಂಗುರಂಗಿನ ತೋರಣಗಳು ಮತ್ತು ದೀಪಾಲಂಕಾರಗಳು ಹಬ್ಬದ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದವು. ಉತ್ಸವದ ಆಚರಣೆಗಳು, ಮುಂಜಾನೆ ೩ ಘಂಟೆಗೆ, ಹರೇಕೃಷ್ಣ ಗಿರಿಯ ಶ್ರೀನಿವಾಸ ಗೋವಿಂದ ದೇವರ ಹಾಗೂ ವೈಕುಂಠ ಗಿರಿಯ ರಾಜಾಧಿರಾಜ ಗೋವಿಂದ ದೇವರ ಸುಪ್ರಭಾತ ಸೇವೆಯೊಂದಿಗೆ ಪ್ರಾರಂಭವಾದವು. ಬಳಿಕ ಮೂಲವಿಗ್ರಹಗಳಿಗೆ ಪಂಚಾಮೃತ, ಪಂಚಗವ್ಯ, ಹಣ್ಣಿನರಸಗಳು ಮುಂತಾದ ಮಂಗಳಕರ ದ್ರವ್ಯಗಳನ್ನೊಳಗೊಂಡ, ವೈಭವೋಪೇತ ಅಭಿಷೇಕವನ್ನು ನೆರವೇರಿಸಲಾಯಿತು. ನಂತರ ದೇವರುಗಳನ್ನು ನವವಸ್ತ್ರಗಳು, ಒಡವೆಗಳು ಮತ್ತು ಪರಿಮಳಯುಕ್ತ ರಂಗುರಂಗಿನ ಪುಷ್ಪಮಾಲೆಗಳಿಂದ ಸಿಂಗರಿಸಲಾಯಿತು.

ಶ್ರೀ ರಾಧಾಕೃಷ್ಣಚಂದ್ರರ ಉತ್ಸವ ವಿಗ್ರಹಗಳು, ಅನಂತಶೇಷನ ಮೇಲೆ ಆಸೀನರಾದ ಲಕ್ಷ್ಮಿನಾರಾಯಣರ ರೂಪದಲ್ಲಿ, ಹರೇಕೃಷ್ಣ ಗಿರಿಯ ವೈಕುಂಠದ್ವಾರವನ್ನು ಅಲಂಕರಿಸಿದ್ದರು. ವೈಕುಂಠಗಿರಿಯಲ್ಲಿ, ಶ್ರೀ ರಾಜಗೋಪಾಲ ಸ್ವಾಮಿ, ರುಕ್ಮಿಣಿ ಮತ್ತು ಸತ್ಯಭಾಮೆಯರು ವೈಕುಂಠದ್ವಾರವನ್ನು ಅಲಂಕರಿಸಿದ್ದರು. ಲಕ್ಷಾರ್ಚನೆ ಸೇವೆ , ಕುಂಕುಮಾರ್ಚನೆ ಮತ್ತು ಕಲ್ಯಾಣೋತ್ಸವಗಳು ಉತ್ಸವದ ಪ್ರಮುಖ ಆಕರ್ಷಣೆಗಳಾಗಿದ್ದವು. ಏಕಾಂತಸೇವೆ ಮತ್ತು ಮಹಾಮಂಗಳಾರತಿಗಳೊಂದಿಗೆ, ವೈಕುಂಠ ಏಕಾದಶಿಯ ಪರ್ವವು ಪರಿಸಮಾಪ್ತಿಗೊಂಡಿತು.

ರಾಜ್ಯದ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಪ್ರಮುಖ ರಾಜಕಾರಣಿಗಳಾದ ಬಿ ವೈ ವಿಜಯೇಂದ್ರ, ಶ್ರೀ ಆರ್.ವಿ. ದೇಶಪಾಂಡೆ, ಶ್ರೀ ಕೆ. ಎಚ್. ಮುನಿಯಪ್ಪ, ಡಾ. ಅಶ್ವಥ್ ನಾರಾಯಣ್, ಶ್ರೀ ಗೋಪಾಲಯ್ಯ, ಸಿನೀ ಜಗತ್ತಿನ ಪ್ರಖ್ಯಾತ ತಾರೆಗಳಾದ ಶ್ರೀ ರಮೇಶ್ ಅರವಿಂದ್, ಶ್ರೀಮತಿ ಪ್ರಿಯಾಂಕ ಉಪೇಂದ್ರ, ಶ್ರೀ ಜಗ್ಗೇಶ್ ಇನ್ನಿತರ ಗಣ್ಯವ್ಯಕ್ತಿಗಳು ಈ ಶುಭಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ, ವೈಕುಂಠದ್ವಾರವನ್ನು ಪ್ರವೇಶ ಮಾಡಿ, ಭಗವಂತನ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ, ಜನಪ್ರಿಯ ಗಾಯಕರಾದ ಮೇಧಾ ವಿದ್ಯಾಭೂಷಣ ಮತ್ತು ಸೂರ್ಯಗಾಯತ್ರಿಯವರಿಂದ ವಿಶೇಷ ಸಂಗೀತಸೇವೆ ಕಾರ್ಯಕ್ರಮವು ನಡೆಯಿತು.

ಶ್ರೀ ವೈಕುಂಠ ಏಕಾದಶಿಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಎಲ್ಲ ಭಕ್ತರಿಗೂ ಪ್ರಸಾದ ವಿತರಣೆ ಮಾಡಲಾಯಿತು. ವೈಕುಂಠ ಏಕಾದಶಿಯ ಪ್ರಯುಕ್ತ ತಯಾರಿಸಲಾದ ವಿಶೇಷ ಲಡ್ಡುಗಳನ್ನು ಸಹ ದಿನವಿಡೀ ವಿತರಿಸಲಾಯಿತು. ಸರತಿ ಸಾಲು, ಪಾದುಕ ಸೇವೆ, ಕುಡಿಯುವ ನೀರು ಮುಂತಾದ ಜನಸ್ನೇಹಿ ವ್ಯವಸ್ಥೆಗಳು ಲಕ್ಷಾಂತರ ಭಕ್ತರ ಸುಗಮ ದರ್ಶನ ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸಿದವು.

ಈ ಶುಭ ಸಂದರ್ಭದಲ್ಲಿ, ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರಾದ ಶ್ರೀ ಮಧುಪಂಡಿತ ದಾಸರು ಮಾತನಾಡುತ್ತಾ, “ವೈಕುಂಠ ಏಕಾದಶಿಯ ಶುಭಸಂದರ್ಭದಲ್ಲಿ, ಹರೇಕೃಷ್ಣ ಗಿರಿ ಮತ್ತು ವೈಕುಂಠ ಗಿರಿಯ ನಮ್ಮ ದೇವಸ್ಥಾನಗಳಿಗೆ, ನಗರದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುವುದನ್ನು ಕಂಡು ಬಹು ಸಂತಸವಾಗಿದೆ. ವೈಕುಂಠದ್ವಾರವನ್ನು ಪ್ರವೇಶ ಮಾಡಿ, ಭಗವಂತನ ದರ್ಶನವನ್ನು ಪಡೆದ ಅವರೆಲ್ಲರೂ ತುಂಬಾ ಅದೃಷ್ಟವಂತರು. ಶ್ರೀ ಶ್ರೀನಿವಾಸ ಗೋವಿಂದನು ಅವರೆಲ್ಲರಿಗೆ ಶಾಂತಿ, ಸಂತೋಷ ಮತ್ತು ಭಕ್ತಿಗಳಿಂದ ತುಂಬಿದ ಸಂವತ್ಸರವನ್ನು ಅನುಗ್ರಹಿಸಲಿ” ಎಂದರು.

Previous articleBGS and SJB Group of Institutions has rendered invaluable service to the field of education: Hulikal Nataraj

LEAVE A REPLY

Please enter your comment!
Please enter your name here