Home Bengaluru ಅಂತರಿಕ್ಷ ಹೊಂಗಿರಣ

ಅಂತರಿಕ್ಷ ಹೊಂಗಿರಣ

0

ಬೆಂಗಳೂರ್: ದಿನಾಂಕ 05.09.2025 ರಂದು ಶುಕ್ರವಾರ ಬನಶಂಕರಿಯ ಶಾಸಕರ ಭವನ ಆರ್ ಅಶೋಕ್ ಸಭಾಂಗಣ,ದಲ್ಲಿ ಶ್ರೀಮತಿ ಶುಭಾ ಹಾಗೂ ಶ್ರೀ ವಾಸುಕಿ ಆಚಾರ್ಯ ರವರು ಅಗಲಿದ ತಮ್ಮ ಮಗನ ಹುಟ್ಟು ಹಬ್ಬವನ್ನು ಸಮಾಜ ಸೇವೆಯಲ್ಲಿ ತೊಡಗಿರುವ ಸಂಘ ಸಂಸ್ಥೆಗಳನ್ನು ಗುರುತಿಸಿ ಮಂಗಳ ದಾನ ನೀಡುವ ಮುಖಾಂತರ ವಿಭಿನ್ನವಾಗಿ ಆಚರಿಸಿದರು. ಶುಭಂಕರೋತಿ ಮೈತ್ರೇಯಿ ಗುರುಕುಲ ತಂಡದ ಪ್ರಾರ್ಥನೆಯ ನಂತರ ಶ್ರೀ ರವಿಕುಸುಬಿಯವರು ಎಲ್ಲರನ್ನೂ ಸ್ವಾಗತಿಸಿದರು.ಗಣ್ಯರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಶ್ರೀಮತಿ ಶುಭಾ ವಾಸುಕಿಯವರು ಮಾತನಾಡಿ ಕುಂಭ ಮೇಳಕ್ಕೆ ಹೋದ ಮಗ ಅಗಲಿದ ಕ್ಲಿಷ್ಟ ಸವಾಲಿನ‌ ಸಮಯದಲ್ಲಿ ತಮಗೆ ಧೈರ್ಯ ತುಂಬಿ ಸಾಂತ್ವನ ನೀಡಿದ ಹಲವರ ಸಹಕಾರವನ್ನು ನೆನೆದು ಕೃತಜ್ಞತೆ ಸಲ್ಲಿಸಿದರು. ಮುಖ್ಯವಾಗಿ ಸಂಸದರಾದ ತೇಜಸ್ವಿ ಸೂರ್ಯ, ಬ್ರಿಗೇಡಿಯರ್ ಎಸ್ ಪಿ ಸಿಂಗ್, ಲೆಫ್ಟನಂಟ್ ಕರ್ನಲ್ ಸತೀಶ್ ಶರ್ಮ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕಿನ ಸಹೋದ್ಯೋಗಿಗಳು ನೀಡಿದ ಸಹಕಾರ ಮಹತ್ತರವಾದುದು ಎಂದರು. ಸದಾ ಸ್ಪೂರ್ತಿಯ ಸೆಲೆಯಾಗಿ ಕಲೆ ಮತ್ರು ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಕೊಂಡು ಸೃಜನಶೀಲವಾಗಿ ಬಾಳಿ ಬದುಕಿದ ತಮ್ಮ ಪುತ್ರ ಅಂತರಿಕ್ಷನ ಕೆಲವು ನೆನಪುಗಳನ್ನು ತೆರೆದಿಟ್ಟರು.

ಆತನಿಗೆ ನಟ ನಿರ್ಮಾಪಕನಾಗಿ ಬೆಳೆಯುವ ಹಂಬಲವಿತ್ತು .ಮತ್ತೊಬ್ಬರ ಅಡಿಯಾಳಾಗಿ ಕೆಲಸ ಮಾಡಲು ಆತನಿಗೆ ಇಷ್ಟವಿರಲಿಲ್ಲ. ಹಲವರಿಗೆ ಉದ್ಯೋಗ ನೀಡಬಲ್ಲ ತನ್ನದೇ ಸಾಮ್ರಾಜ್ಯ ಕಟ್ಟುವ ದೊಡ್ಡ ಕನಸುಗಳು ಆತನಿಗಿದ್ದವು ಎಂದರು. ಅಂತರಿಕ್ಷ ನಟಿಸಿ ನಿರ್ಮಿಸಿದ ಚಿತ್ರ ಮೈಲಾಪುರದಬಗ್ಗೆ ಹೇಳಿದರು. ನಾವು ಇಂದು ಆತನ ಹುಟ್ಟು ಹಬ್ಬದ ದಿನ ನಡೆಸುತ್ತಿರುವ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಆತನೇ ಪ್ರೇರಣೆಯಾಗಿದ್ದಾನೆ ಎಂದರು.

ಲೆಫ್ಟ್ನಂಟ್ ಕರ್ನಲ್ ಸತೀಶ್ ಮಿಶ್ರ ಅವರು ಮಾತನಾಡಿದ ವೀಡಿಯೋ ಪ್ರದರ್ಶಿಸಲಾಯಿತು. ಅಂತರಿಕ್ಷನದು ದೈವಿಕ ಮರಣ ಎಂದ ಅವರು ಈ ಸಂದರ್ಭ ಜನನಾಯಕ ಮನಸ್ಸು ಮಾಡಿದರೆ ಎಷ್ಟೋ ಸಹಾಯ ಮಾಡಬಹುದು ಎಂಬುದನ್ನು ಸಂಸದ ತೇಜಸ್ವಿ ಸೂರ್ಯ ತೋರಿಸಿಕೊಟ್ಟಿದ್ದಾರೆ ಎಂದು ತಮ್ಮ ಮಾತಿನಲ್ಲಿ ಪ್ರಶಂಸಿಸಿದ್ದರು. ಅಂತರಿಕ್ಷನ ಮಿತ್ರರು ಕುಟುಂಬದವರು ಮಾತನಾಡಿದ ತುಣುಕುಗಳನ್ನು ಪ್ರದರ್ಶಿಸುವುದರೊಂದಿಗೆ ಮಂಗಳದಾನ‌ ಪಡೆಯುತ್ತಿರುವ ಸಂಘ ಸಂಸ್ಥೆಗಳ ಕಿರುಪರಿಚಯದ ವೀಡಿಯೋಗಳನ್ನೂ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಾನಕಲಾಭೂಷಣ ಡಾ ಆರ್ ಕೆ ಪದ್ಮನಾಭರವರು ಗಾಯನದಲ್ಲೇ ಶ್ರೀಮತಿ ಶುಭಾ ಹಾಗೂ ಶ್ರೀ ವಾಸುಕಿ ಆಚಾರ್ಯ ರವರ ಸಮಾಜ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಲೇಖಕಿ ಶ್ರೀಮತಿ ದೀಪಾ ಫಡ್ಕೆಯವರು ಮಾತನಾಡಿ ಮಕ್ಕಳನ್ನು ಕಳೆದುಕೊಂಡ ಪಾಂಚಾಲಿ ಅಶ್ವತ್ಥಾಮನನ್ನು ಕ್ಷಮಿಸುವ ಸನ್ನಿವೇಶವನ್ನು ಹೇಳಿ ತಾಯಿಯ ಅಂತಃಕರಣ ಅಂತಹದು.ದುಃಖ ಮರೆತು ಶಕ್ತಿ ತುಂಬುವುದೇ ಮನುಷ್ಯತ್ವ.

ಮನುಷ್ಯರಾಗುವತ್ತ ಹೆಜ್ಜೆ ಹಾಕುವುದೇ ಬದುಕಿನ ಉದ್ದೇಶ.ಮುಂದಿನ ದಿನಗಳಲ್ಲಿ ಮಗನ ಅಗಲಿಕೆಯ ಯೋಚನೆ ಬಾರದ ಹಾಗೆ ಚಟುವಟಿಕೆಯಿಂದ ಕಾರ್ಯಪ್ರವೃತ್ತರಾಗಲಿ ಎಂದು ಶುಭಾ ವಾಸುಕಿ ದಂಪತಿಗಳ ಸಮಾಜ ಸೇವೆಯನ್ನು ಪ್ರಶಂಸಿಸಿ ಹಾರೈಸಿದರು. ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಬೆಂ ಶ್ರೀ ರವೀಂದ್ರ ರವರು ಮಾತನಾಡಿ ಶುಭಾ ಹಾಗೂ ವಾಸುಕಿ ಆಚಾರ್ಯ ರವರು ಬಹುಮುಖ ಪ್ರತಿಭೆಯುಳ್ಳವರು.

ಒಂದೇ ಭಾವದಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.ಕ್ಲಿಷ್ಟ ಪರಿಸ್ಥಿತಿಯನ್ನು ಆತ್ಮಸ್ಥೈರ್ಯದಿಂದ ಎದುರಿಸಿದ್ದಾರೆ. ಸಕಾರಾತ್ಮಕ ಮನವುಳ್ಳವರಿಗೆ ಸಕಾರಾತ್ಮಕ ಸಹಾಯ ಒದಗಿಬರುತ್ತದೆ ಎಂದರು. ಅಂತರಿಕ್ಷನ ಪಾರ್ಥೀವ ಶರೀರ ಮನೆಗೆ ತಲುಪುವವರೆಗೂ ಜೊತೆಗೇ ಇದ್ದ ಯೋಗಪಟು ಶ್ರೀ ಚೇತಕ್ ರವರ ಮಾನವೀಯತೆ ಯನ್ನು ಪ್ರಶಂಸಿಸಿದರು. ಅಂತರಿಕ್ಷನ ಹೊಂಗಿರಣದ ಬೆಳಕು ಸದಾ ನಮ್ಮೊಂದಿಗಿರುತ್ತದೆ.ಆತ್ಮಕ್ಕೆ ಸಾವಿಲ್ಲ ಎಂದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಂಗರಾಜನ್ ಮಾಡಿದರು ಕೊನೆಯಲ್ಲಿ ಶ್ರೀಮತಿ ರೇಣುಕಾ ದೇಸಾಯಿ ಯವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Previous articleGunasheela Celebrates 50 Years of Excellence in Obstetrics,Gynaecology and Reproductive Medicine
Next articleAnthariksha Hongirana

LEAVE A REPLY

Please enter your comment!
Please enter your name here