Home Bengaluru ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳತ್ತ ಯುವ ಉದ್ಯಮಿಗಳು ಗಮನಹರಿಸಿ: ಎಐಪಿಎಂಎ ಅಧ್ಯಕ್ಷ ಅರವಿಂದ್‌ ಮೆಹ್ತಾ...

ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳತ್ತ ಯುವ ಉದ್ಯಮಿಗಳು ಗಮನಹರಿಸಿ: ಎಐಪಿಎಂಎ ಅಧ್ಯಕ್ಷ ಅರವಿಂದ್‌ ಮೆಹ್ತಾ ಕರೆ

ಪ್ಲಾಸ್ಟಿಕ್‌ ಉದ್ಯಮದ ಬೆಳವಣಿಗಾಗಿ ನಗರದಲ್ಲಿ 4ನೇ ತಂತ್ರಜ್ಞಾನ ಸಮ್ಮೇಳನ ಪ್ಲಾಸ್ಟಿಕ್‌ ವಸ್ತುಗಳ ಆಮದಿಗೆ ಪರ್ಯಾಯ ಕ್ರಮಗಳ ಅಳವಡಿಕೆಯ ಬಗ್ಗೆ ಚರ್ಚೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ರಾಜ್ಯದ ಪ್ರಮುಖ ಪ್ಲಾಸ್ಟಿಕ್‌ ಉತ್ಪಾದರು ಭಾಗಿ

0

ಬೆಂಗಳೂರು, ಆಗಸ್ಟ್‌ 10: 2021-22 ನೇ ಸಾಲಿನಲ್ಲಿ ಭಾರತ ದೇಶ ಸುಮಾರು 37,500 ಕೋಟಿ ರೂಪಾಯಿಗಳ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಈ ಆಮದಿನ ಅವಲಂಬನೆಯನ್ನ ತಪ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದ ವಿಫುಲ ಅವಕಾಶಗಳನ್ನ ಉದ್ಯಮಿಗಳು ಗಮನ ಹರಿಸಬೇಕಾಗಿದೆ ಎಂದು ಆಲ್‌ ಇಂಡಿಯಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ ಆಡಳಿತ ಮಂಡಳಿಯ ಅಧ್ಯಕ್ಷರಾದ ಅರವಿಂದ್‌ ಮೆಹ್ತಾ ಹೇಳಿದರು.

ಇಂದು ನಗರದಲ್ಲಿ ನಡೆದ 4ನೇ ತಂತ್ರಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಖಿಲ ಭಾರತ ಪ್ಲಾಸ್ಟಿಕ್‌ ಉತ್ಪಾದಕರ ಸಂಘದ ಇತ್ತೀಚಿನ ಅಧ್ಯಯನದ ಪ್ರಕಾರ 2021-22 ರಲ್ಲಿ ಭಾರತ 37,500 ಕೋಟಿ ರೂಪಾಯಿ ಮೊತ್ತದ ಪ್ಲಾಸ್ಟಿಕ್‌ ಆಮದು ಮಾಡಿಕೊಂಡಿದೆ. ನೆರೆಯ ಚೀನಾ ದೇಶದಿಂದ ಶೇಡಕಾ 48 ರಷ್ಟು ವಸ್ತುಗಳು ಆಮದಾಗುತ್ತಿವೆ. ಆಮದು ಅವಲಂಬನೆಯನ್ನು ತಪ್ಪಿಸಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಐಪಿಎಂಎ ದೇಶದ 6 ವಲಯಗಳಲ್ಲಿ ಪ್ಲಾಸ್ಟಿಕ್‌ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳು ದೇಶದ ಪ್ಲಾಸ್ಟಿಕ್ ವಲಯಕ್ಕೆ ವೇಗವರ್ಧಕವಾಗಿವೆ. ಸಮ್ಮೇಳನ ತಂತ್ರಜ್ಞಾನ ಮತ್ತು ವ್ಯಾಪಾರ ಅವಕಾಶಗಳ ಕುರಿತು ಬೆಳಕು ಚೆಲ್ಲಲಿದೆ. ಪ್ರದರ್ಶನದಲ್ಲಿ ಆಮದು ಮಾಡಿಕೊಂಡ ವಸ್ತುಗಳ ಪ್ರದರ್ಶನದ ಜೊತೆಗೆ ಈ ವಲಯದಲ್ಲಿ ಆಗುತ್ತಿರುವ ಆಧುನಿಕ ಬೆಳವಣಿಗೆ ಕುರಿತು ಬೆಳಕು ಚೆಲ್ಲಲಾಗುತ್ತಿದೆ. ದೇಶ ಪ್ಲಾಸ್ಟಿಕ್ ವಲಯದಲ್ಲಿ ಸ್ವಾವಲಂಬಿಯಾಗುವ ಗುರಿ ಹೊಂದಿದ್ದು, ಇದಕ್ಕಾಗಿ ಈಚಿನ ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಎಐಪಿಎಂಎ ಅಧ್ಯಕ್ಷ ಮಯೂರ್‌ ಡಿ. ಶಾ ಮಾತನಾಡಿ, ಭಾರತ ವಿಶ್ವದ ಪ್ರಮುಖ ಪ್ಲಾಸ್ಟಿಕ್ ಉತ್ಪಾದನಾ ತಾಣವಾಗಿ ಹೊರ ಹೊಮ್ಮಲು ಅವಕಾಶವಿದ್ದು, ವಾರ್ಷಿಕ 7 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಲಾಸ್ಟಿಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆರ್ಥಿಕತೆಯಲ್ಲಿ ಭಾರತ ನಿರ್ಣಾಯಕ ಪಾತ್ರ ವಹಿಸಲಿದ್ದು, 50 ಸಾವಿರ ಪ್ಲಾಸ್ಟಿಕ್ ಸಂಸ್ಕರಣಾ ಕೇಂದ್ರಗಳ ಮೂಲಕ ಸರಕು ಉತ್ಪಾದಿಸಬಹುದಾಗಿದೆ. ಇದು ಈ ವಲಯದ ಶೇ 90 ರಷ್ಟು ಪ್ರಮಾಣವಾಗಿದೆ ಎಂದರು.

“ದೇಶವನ್ನು 5 ಟ್ರಿಲಿಯನ್ ಡಾಲರ್ ಮೊತ್ತದ ಆರ್ಥಿಕತೆಯ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ಲಾಸ್ಟಿಕ್ ಕೈಗಾರಿಕೆ ಪ್ರಮುಖ ಪಾತ್ರ ವಹಿಸಲಿದೆ. ಅಹಮದಾಬಾದ್ ನಲ್ಲಿ ನಡೆದ ಸಮ್ಮೇಳನದಲ್ಲಿ ಉತ್ಪಾದಕರು ಮತ್ತು ಮಾರಾಟಗಾರರ ನಡುವೆ ನೇರ ವೇದಿಕೆ ಕಲ್ಪಿಸಲಾಗಿತ್ತು. ಇದು ಹಲವಾರು ತಂತ್ರಜ್ಞಾನ ಮತ್ತು ನಾವೀನ್ಯತೆಯ ಮಾದರಿಗಳನ್ನು ಆಮದು ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಮಯೂರ್‌ ಡಿ. ಶಾ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಸಿ.ಎ ಶಶಿಧರ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿರುವ ಹಲವಾರು ಸಣ್ಣ ಕೈಗಾರಿಕೆಗಳು ಪ್ಲಾಸ್ಟಿಕ್‌ ಉತ್ಪನ್ನಗಳನ್ನ ತಯಾರಿಸುತ್ತಿವೆ. ಆದರೆ, ಜನರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಉತ್ಪಾದಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಏಕ ಬಳಕೆಯ ಪ್ಲಾಸ್ಟಿಕ್‌ ಮಾತ್ರ ಬ್ಯಾನ್‌ ಆಗಿದ್ದು, ಬಹುಬಳಕೆಯ ಮತ್ತು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಉತ್ಪನ್ನಗಳನ್ನ ತಯಾರಿಸುವ ಕೈಗಾರಿಕೆಗಳ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಕೈಗಾರಿಕಾ ನೀತಿಯಲ್ಲಿ ಪ್ಲಾಸ್ಟಿಕ್‌ ಕೈಗಾರಿಕೆಗಳ ಯಾವುದೇ ಪ್ರಸ್ತಾಪ ಇಲ್ಲ. ಕ್ಲಸ್ಟರ್‌ ಬೇಸ್ಡ್‌ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಅವಕಶ್ಯತೆಯಿದೆ. ಪ್ಲಾಸ್ಟಿಕ್‌ ಕ್ಲಸ್ಟರ್‌ ನಿರ್ಮಾಣದಿಂದ ಹಲವಾರು ಕೈಗಾರಿಕೆಗಳಿಗೆ ಅನುಕೂಲವಾಗಿಲಿದೆ ಎಂದು ಹೇಳಿದರು.

ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಮಾತನಾಡಿ, ರಾಜ್ಯದಲ್ಲಿ ಹೂಡಿಕೆಗೆ ವ್ಯಾಪಕವಾದ ಅವಕಾಶವಿದೆ. ಸಣ್ಣ ಕೈಗಾರಿಕೆಗಳಿಗೂ ರಾಜ್ಯದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸಬ್ಸಿಡಿ ಹಾಗೂ ಹಲವಾರು ಆಕರ್ಷಕ ಯೋಜನೆಗಳನ್ನು ಅಳವಡಿಸಲಾಗಿದೆ. ಏಕಬಳಕೆಯ ಪ್ಲಾಸ್ಟಿಕ್‌ ಹೊರತುಪಡಿಸಿ ಬೇರೆ ಉತ್ಪನ್ನಗಳ ತಯಾರಿಕೆಗೆ ಯಾವುದೇ ಸಮಸ್ಯೆ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ಲಾಸ್ಟಿಕ್‌ ಉದ್ಯಮವನ್ನು ಪ್ರಾರಂಭಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಉದ್ಯೋಗ ಮಿತ್ರ ಸಂಪರ್ಕಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ಲಾಸ್ಟಿಕ್‌ ಉತ್ಪಾದಕರು ಭಾಗವಹಿಸಿದ್ದರು.

ನಾಲ್ಕನೇ ಸಮ್ಮೇಳನ ವ್ಯಾಪಾರ ಮತ್ತು ಉತ್ಪಾದನೆಯ ಮಾರ್ಗನಕ್ಷೆಯನ್ನು ರೂಪಿಸಲಿದೆ. ಮುಂದಿನ ಸಮ್ಮೇಳನಗಳು ಆಗಸ್ಟ್ 18 ರಂದು ಚೆನ್ನೈ ಮತ್ತು ಆಗಸ್ಟ್ 31 ರಂದು ಕೊಲ್ಕತ್ತಾದಲ್ಲಿ ನಡೆಯಲಿವೆ.

Previous articleVST Tillers Tractors Ltd Introduces Series 9, The Most Advanced Compact Tractor Range
Next articleಮಾಲೀನ್ಯ ಸಮಸ್ಯೆಗಳ ಬಗ್ಗೆ ನಗರದ ಜನತೆ ಎಚ್ಚೆತ್ತುಕೊಳ್ಳಲು ಇದು ಸಕಾಲ – ಡಾ. ತೇಜಸ್ವಿನಿ ಅನಂತ್ ಕುಮಾರ್

LEAVE A REPLY

Please enter your comment!
Please enter your name here