Home Bengaluru ಅನಧಿಕೃತ ರಾಪಿಡೋ, ಓಲಾ, ಉಬರ್, ಗೂಡ್ಸ್ ಪೋರ್ಟಲ್ ಗಳ ವಿರುದ್ಧ ಚಾಲಕ ಸಂಘಟನೆಗಳ ಆಕ್ರೋಶ :...

ಅನಧಿಕೃತ ರಾಪಿಡೋ, ಓಲಾ, ಉಬರ್, ಗೂಡ್ಸ್ ಪೋರ್ಟಲ್ ಗಳ ವಿರುದ್ಧ ಚಾಲಕ ಸಂಘಟನೆಗಳ ಆಕ್ರೋಶ : ಖಾಲಿ ತಪ್ಪಲೆ, ತಟ್ಟೆಗಳನ್ನು ಹಿಡಿದು ವಿನೂತನ ಪ್ರತಿಭಟನೆ

0

ಬೆಂಗಳೂರು, ಜ, 25: ಅನಧಿಕೃತವಾಗಿ ನಡೆಯುತ್ತಿರುವ ರಾಪಿಡೋ, , ಓಲಾ, ಉಬರ್, ಹಾಗೂ ಗೂಡ್ಸ್ ಪೋರ್ಟರ್ ನಂತಹ ಆನ್ಲೈನ್ ಸಂಸ್ಥೆಗಳು ವಿರುದ್ಧ ಹಾಗೂ ಇಂತಹ ಕಾನೂನುಬಾಹಿರ ಸಂಸ್ಥೆಗಳನ್ನು ಪೋಷಿಸುತ್ತಿರುವ ಸಾರಿಗೆ ಅಧಿಕಾರಿಗಳ ಧೋರಣೆ ಪ್ರತಿಭಟಿಸಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನ ಪ್ರತಿನಿಧಿಗಳು ಫ್ರೀಡಂ ಪಾರ್ಕ್ ನ ಭಗತ್ ಸಿಂಗ್ ಪ್ರತಿಮೆ ಎದುರು ಖಾಲಿ ತಪ್ಪಲೆ, ತಟ್ಟೆಗಳನ್ನು ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು.

ಚಾಲಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಚಾಲಕರು ಖಾಲಿ ಪಾತ್ರೆ ಸಾಮಾನುಗಳನ್ನು ಬಡಿದು, ಕಪ್ಪು ಪಟ್ಟಿ ಧರಿಸಿ ಘೋಷಣೆ ಕೂಗಿದರು. ಕಾನೂನು ಬಾಹಿರ ಸಾಗಾಣೆ ವಾಹನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವು ಸರ್ಕಾರದಿಂದ ನಿಯಮಾನುಸಾರ ಅನುಮತಿ ಪಡೆದಿಲ್ಲ. ಇದರಿಂದ ಖಾಸಗಿ ವಾಹನ ಚಾಲಕರ ದುಡಿಮೆಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪದೇ ಪದೇ ಮಾಡಿದ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಸಾರಿಗೆ ಅಧಿಕಾರಿಗಳೇ ಇಂತಹ ಕಾನೂನು ಬಾಹಿರ ಸಂಸ್ಥೆಗಳ ಪೋಷಕರಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಮಾಡಿದ್ದೇವೆ.

ಸರ್ಕಾರದ ಧೋರಣೆಯಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದರ ತಾರತಮ್ಯ ಮಾಡುತ್ತಿರುವ ಓಲಾ, ಉಬರ್ ಗೆ ಕೇಂದ್ರ ಸರ್ಕಾರ ಈಗಾಗಲೇ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದೆ. ಚಾಲಕರ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೂ ಕೂಡ ನೇರ ಹೊಣೆ. ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜುಕನ್ನಡಿಗ ಮಾತನಾಡಿ, ಸರ್ಕಾರದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕ್ಷುಲ್ಲಕ ಕಾರಣಗಳನ್ನು ನೀಡಿ ಚಾಲಕರಿಗೆ ಅನ್ಯಾಯ ಎಸಗುತ್ತಿದ್ದಾರೆ. ಇಂತಹ ಕಾನೂನು ಬಾಹಿರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತಮಟ್ಟದ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Previous articleಕೇರಳದಿಂದ ಸ್ಥಳೀಯ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಅಖಿಲ ಭಾರತ ಅಭಿಯಾನಕ್ಕೆ ಚಾಲನೆ
Next articleIndia is ready for the largest student chef competition in the world

LEAVE A REPLY

Please enter your comment!
Please enter your name here