ಬೆಂಗಳೂರು, ಅಕ್ಟೋಬರ್, 28: ಹಿರಿಯ ರಾಜಕೀಯ ಮುತ್ಸದ್ದಿ ಅನಂತ್ ಕುಮಾರ್ ಅವರ ಕರ್ತವ್ಯ ನಿಷ್ಟೇ, ತೇಜಸ್ವಿನಿ ಅನಂತ್ ಕುಮಾರ್ ಅವರ ನಿರಂತರತೆ ಅನನ್ಯವಾದದ್ದು ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಗವಿಪುರದ ಅದಮ್ಯ ಚೇತನ ಸಂಸ್ಥೆಯ ಕಚೇರಿಯಲ್ಲಿ ಅನಂತಕುಮಾರ್ ಪ್ರತಿಷ್ಠಾನ ಮತ್ತು ಅದಮ್ಯ ಚೇತನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಸಿಕ ಪತ್ರಿಕೆ ಅನಂತಪಥ ಮತ್ತು ಚಿಣ್ಣರ ಚೇತನ ಬಿಡುಗಡೆ ಮಾಡಿ ಮಾತನಾಡಿದ ಅವರು, ತಮ್ಮ ಸೇವಾ ಚಟುವಟಿಕೆಗಳಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ನಿರಂತರತೆ ಮೈಗೂಡಿಸಿಕೊಳ್ಳದೇ ಇದ್ದಿದ್ದರೆ ಅದಮ್ಯ ಚೇತನ ನಾಡಿನ ಶ್ರೇಷ್ಠ ಸಂಸ್ಥೆಯಾಗಿ ಹೊರ ಹೊಮ್ಮುತ್ತಿರಲಿಲ್ಲ. ತೇಜಸ್ವಿನಿ ಅನಂತ್ ಕುಮಾರ್ ಕರುನಾಡಿನ ಅಸಮಾನ್ಯ ಕನ್ನಡಿಗರು. ಗಿಡಗಳನ್ನು ಬಹಳಷ್ಟು ಮಂದಿ ನೆಡುತ್ತಾರೆ. ಆದರೆ ಅದಮ್ಯ ಚೇತನ ಗಿಡಗಳನ್ನು ಬೆಳೆಸುತ್ತದೆ. ಪ್ರತಿಯೊಬ್ಬರಿಗೂ ಇವರು ಮಾದರಿಯಾಗಿದ್ದು, ಇವರ ವೃತ್ತಿ ನಿಷ್ಠ ನಮಗೆಲ್ಲರಿಗೂ ಪ್ರೇರಣೆ ಎಂದರು.
ಅನಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಬರುವ ಮತ್ತು ಬಿಜೆಪಿ ಸೇರುವ ಬಗ್ಗೆ ಕೇಶವಕೃಪದಲ್ಲಿ ಮೊದಲು ಮಾಹಿತಿ ತಿಳಿಸಿದ್ದೇ ತಮಗೆ. ಅನಂತ್ ಕುಮಾರ್ 1996 ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ ದಿನದಿಂದ ನಾವು ಒಟ್ಟೊಟ್ಟಿಗೆ ಕೆಲಸ ಮಾಡಿದ್ದೇವೆ. ಅನಂತ್ ಕುಮಾರ್ 2008 ರಲ್ಲಿ ತಮ್ಮನ್ನು ಮಂತ್ರಿ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು ತಮ್ಮ ಕೆಲಸಗಳ ಮೂಲಕ ಅಮರರಾಗಿದ್ದಾರೆ. ಅನಂತ್ ಕುಮಾರ್ ಇಲ್ಲದೇ ರಾಜ್ಯಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅಂತಹವರು ಹೇಳುತ್ತಿದ್ದಾರೆ ಎಂದರೆ ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ತಿಳಿಯುತ್ತದೆ. ಮತ್ತೆ ಮತ್ತೆ ಇಂತಹ ವ್ಯಕ್ತಿ ಬೇಕು ಎಂದು ನೆನಪಿಗೆ ಬರುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಸ್ಮರಿಸಿಕೊಂಡರು.
ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಲವು ದೇವಾಲಯಗಳ ಛಾಯಾಚಿತ್ರಗಳ ಪ್ರದರ್ಶನ, ಯೋಗ ಶಿಕ್ಷಣ ಪ್ರಾತ್ಯಕ್ಷಿಕೆ ಕೂಡ ಆಯೋಜಿಸಲಾಗಿದೆ. ಲಕ್ಷ್ಮಿ ಸ್ವಯಂವರ ಗಮಕ ವಾಚನ, ನಟರಾಜ ನೃತ್ಯ ಕಲಾ ಮಂದಿರದ ಕಲಾವಿದರಿಂದ ನೈತ್ಯರೂಪಕವನ್ನು ಪ್ರಸ್ತುಪಡಿಸಲಾಗಿದೆ. ಯೋಜಿಸಿದ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.