ಬೆಂಗಳೂರು: ಜಯನಗರದ 5ನೇ ಬಡಾವಣೆ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರ ಆಚಾರ್ಯರ ಮತ್ತು ಶ್ರೀ ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ರಾಯರ ಬೃಂದಾವನಕ್ಕೆ ಐದು ತರಹದ ಹಣ್ಣುಗಳಿಂದ ಹಾಗೂ ಗೋಡಂಬಿ ದ್ರಾಕ್ಷಿ ಮುಂತಾದ ಫಲಗಳಿಂದ ಫಲಪಂಚಾಮೃತ ಅಭಿಷೇಕವೂ ನೆರವೇರಿತು. ನಂತರ ಬಹಳ ಅಪರೂಪವಾದ ಅಲಂಕಾರ ವರ್ಷಕ್ಕೊಮ್ಮೆ ಆಚರಿಸುವಂತಹ “ಶ್ರೀ ಗಂಧ ಲೇಪನ”ದ ಅಲಂಕಾರವನ್ನು ರಾಯರ ಬೃಂದಾವನಕ್ಕೆ ಸಂಪೂರ್ಣವಾಗಿ 12 ಕೆ ಜಿ ಯಷ್ಟು ಶ್ರೀಗಂಧದಿಂದಲೇ 15 ದಿನಗಳ ಕಾಲ ಶ್ರೀಗಂಧದ ಚಂದನವನ್ನು ತೆಗೆದು ಅದರಿಂದ ಅಲಂಕಾರವನ್ನು ಅರ್ಚಕರು ನೆರವೇರಿಸಿದರು.
ಶ್ರೀಗಂಧದಿಂದ ಕಂಗೊಳಿಸುವ ಶ್ರೀ ಗುರುರಾಯರ ಬೃಂದಾವನವನ್ನು ದರ್ಶಿಸಲು ಸಾವಿರಾರು ಭಕ್ತರು ಸನ್ನಿಧಾನಕ್ಕೆ ಆಗಮಿಸಿ, ಶ್ರೀಗಂಧ ಲೇಪನದ ಸೇವೆಯಲ್ಲಿ ಭಾಗವಹಿಸಿ, ಸಂಕಲ್ಪಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ 41ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ವಾನ್ ಸುರೇಶ ಆಚಾರ್ ಇವರಿಂದ ಪ್ರವಚನದ ಕಾರ್ಯಕ್ರಮ ಸಹಿತ ವಿಶೇಷ ಉತ್ಸವದೊಂದಿಗೆ ಸಕಲ ಭಕ್ತರಿಗೂ ಪ್ರಸಾದವು ವಿತರಣೆಯಾಯಿತು. ಶ್ರೀ ಗಂಧದ ಸೇವೆ ಸಲ್ಲಿಸಿದ ಸೇವಾ ಕರ್ತೃಗಳಿಗೆ ಶನಿವಾರದಿಂದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಅಲಂಕರಿಸಿದ ಶ್ರೀ ಗಂಧದ ಪ್ರಸಾದವನ್ನು ಸೇವಾರ್ಥದಾರಿಗೆ ಕೊಡಲಾಗುವುದು